ಲಕ್ನೋ, ಆ 21 (DaijiworldNews/MS): ರಾಮಾಯಣ ರಚನೆಗಾರ ವಾಲ್ಮೀಕಿಯನ್ನು ತಾಲಿಬಾನ್ ಬಂಡುಕೋರರ ಜೊತೆ ಹೊಲೀಕೆ ಮಾಡಿರುವ ಪ್ರಸಿದ್ಧ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ವಾಲ್ಮೀಕಿಯನ್ನು ತಾಲಿಬಾನ್ ಉಗ್ರರಿಗೆ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುವ ಅರೋಪದಲ್ಲಿ ಪಿ.ಎಲ್ ಭಾರತಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮುನವ್ವರ್ ವಿರುದ್ದ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153 ಎ, 295 ಎ, 505 ಬಿ ಮತ್ತು ಎಸ್ ಸಿ/ಎಸ್.ಟಿ ದೌರ್ಜ್ಯನ್ಯ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಲ್ಮೀಕಿಯನ್ನು ತಾಲಿಬಾನ್ ನೊಂದಿಗೆ ಹೋಲಿಸುವ ಮೂಲಕ ದಲಿತರ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆಂದು ಭಾರತಿ ಅವರು ತನ್ನ
ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಾನೆಲೊಂದರ ಸಂದರ್ಶನದಲ್ಲಿ ಮಾತನಾಡಿದ ರಾಣಾ ಅವರು, ರಾಮಾಯಣ ರಚಿಸಿದ ವಾಲ್ಮೀಕಿ ದೇವರಾದರು. ಅದಕ್ಕೂ ಮೊದಲು ಅವರು ದರೋಡೆಕೋರರಾಗಿದ್ದರು. ಅಂತೆಯೇ ತಾಲಿಬಾನ್ ಬಂಡುಕೋರರು ಈಗ ಭಯೋತ್ಪಾದಕರಾಗಿದ್ದಾರೆ. ಜನರು ಮತ್ತು ಪಾತ್ರಗಳು ಬದಲಾಗುತ್ತವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.