ಮುಂಬೈ, ಆ 21 (DaijiworldNews/MS): ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಿದ್ದು ಬೀಡಾಡಿ ದನ, ಶುದ್ದ ಅಪ್ರಯೋಜಕ ಎಂದಿದ್ದು ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸಂಪುಟದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕರಡ್ಜನ್ ಅವರು ಆಶೀರ್ವಾದ್ ಯಾತ್ರೆ'ಯ ಅಂಗವಾಗಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಷಣ ಮಾಡುವ ವೇಳೆ, ರಾಹುಲ್ ಗಾಂಧಿಯವರಿಂದ ಯಾರಿಗೂ ಉಪಯೋಗವಿಲ್ಲ ಎಂದು ಅವಹೇಳನ ಮಾಡಿದ್ದರು. ಅಷ್ಟಕ್ಕೇ ಸುಮ್ಮನಾಗದ ದಾನ್ವೆ ರಾಹುಲ್ ಅವರನ್ನು ಬೀಡಾಡಿ ದನಕ್ಕೆ ಹೋಲಿಕೆ ಮಾಡಿದ್ದರು.
ರಾಹುಲ್ ಗಾಂಧಿ ಯಾರಿಗೂ ಉಪಯೋಗವಿಲ್ಲ. ಅವರು ದೇವರಿಗೆ ಸಮರ್ಪಿತವಾದ 'ಸ್ಯಾಂಡ್' (ಬುಲ್) ನಂತೆ ಇದ್ದಾರೆ. ಅವನು ಎಲ್ಲೆಡೆ ತಿರುಗುತ್ತಾನೆ, ಆದರೆ ಯಾರಿಗೂ ಯಾವುದೇ ಉಪಯೋಗವಿಲ್ಲ ಎಂದಿದ್ದರು.
ಮಹಾರಾಷ್ಟ್ರದ ಕಡೆ ಒಮ್ಮೊಮ್ಮೆ ಆಗತಾನೇ ಹುಟ್ಟಿದ ಕರುವನ್ನು ದೇವರಿಗೆಂದು ಬಿಟ್ಟುಬಿಡುವ ಪದ್ಧತಿ ಇದೆ. ಅದು ಬೀಡಾಡಿ ದನವಾಗಿ ಬೆಳೆಯುತ್ತದೆ. ಅದು ಯಾರ ಹೊಲಕ್ಕೆ ನುಗ್ಗಿ ತಿಂದರೂ ಯಾರೇನೂ ಮಾಡುವುದಿಲ್ಲ. ರಾಹುಲ್ ಅಂಥ ಬೀಡಾಡಿ ದನ ಎಂದು ದಾನ್ವೆ ಭಾಷಣದಲ್ಲಿ ಹೇಳಿದ್ದರು.
ದಾನ್ವೆ ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದಾನ್ವೆ ಅವರ ಹೇಳಿಕೆ ಅಸಭ್ಯವಾಗಿದ್ದು, ಅಘಾತ ತಂದಿದೆ. ಅಸಭ್ಯ ಭಾಷೆ ಬಳಸಿದ ದಾಖಲೆಗಳೇ ಇದ್ದು ಇದರ ಹೊರತಾಗಿಯೂ ಅವರಿಗೆ ಕ್ಯಾಬಿನೆಟ್ನಲ್ಲಿ ಅಂತಹ ಮಹತ್ವದ ಹುದ್ದೆಯನ್ನು ಹೇಗೆ ನೀಡಿದ್ದರೋ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇದಲ್ಲದೆ ತಕ್ಷಣ ದಾನ್ವೆ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕಿಳಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ.