ಬೆಂಗಳೂರು, ಆ 21 (DaijiworldNews/PY): "ಆಗಸ್ಟ್ 23ರಿಂದ 9-12ನೇ ತರಗತಿವರೆಗೆ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಕೊರೊನಾ ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಬಿಬಿಎಂಪಿ, ಸರ್ಕಾರಿ ಶಾಲೆ ತೆರೆಯಬೇಕು. ಆದರೆ, ತರಗತಿಗಳಲ್ಲಿ ಹೆಚ್ಚು ಮಕ್ಕಳು ಇರಬಾರದು ಎನ್ನುವ ಆದೇಶ ಹೊರಡಿಸಲಾಗಿದೆ. ಸದ್ಯಕ್ಕೆ 9-12ನೇ ತರಗತಿಗಳನ್ನು ಆರಂಭಿಸಿ, ಪ್ರಾಯೋಗಿಕವಾಗಿ ನೋಡಿಕೊಂಡು ಬಳಿಕ ಹಂತಹಂತವಾಗಿ 7 ಹಾಗೂ 8ನೇ ತರಗತಿ ತೆರೆಯಲಾಗುವುದು" ಎಂದು ತಿಳಿಸಿದರು.
ರಾಜಕಾರಣಿಗಳು ಮಾಸ್ಕ್ ಹಾಕದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅಧಿಕಾರಿಗಳಾಗಲಿ ಅಥವಾ ಯಾವುದೇ ರಾಜಕಾರಣಿಗಳಾಗಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಂದುವೇಳೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ. ದೆಹಲಿಯಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮಾಸ್ಕ್ ಧರಿಸದವರಿಗೆ ನಮ್ಮಲ್ಲಿಯೇ ದಂಡ ಕಡಿಮೆ. ಎಲ್ಲರೂ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಲೇಬೇಕು" ಎಂದು ಹೇಳಿದರು.