ಶಿವಮೊಗ್ಗ, ಆ 21 (DaijiworldNews/PY): "ಬೆಂಗಳೂರಿನಲ್ಲಿ ರೌಡಿಸಂ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾದಕ ವಸ್ತುಗಳು ಸೇರಿದಂತೆ ರಿಯಲ್ ಎಸ್ಟೇಟ್ ಬಗ್ಗೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೈಬರ್ ಕ್ರೈಂ ವಿಭಾಗವನ್ನು ಕೂಡಾ ಬಲಪಡಿಸಲಾಗಿದೆ. ಸೈಬರ್ ಕ್ರೈಂ ನಿವಾರಣೆಗೆ ಇನ್ಫೋಸಿಸ್ ಸಂಸ್ಥೆ ಸಹ ನೆರವು ನೀಡುತ್ತಿದೆ" ಎಂದು ಹೇಳಿದರು.
"ಅಫ್ಗಾನಿಸ್ತಾನದ ನಾಗರಿಕರು ಇರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹೇಳಿದ್ದೇನೆ. ಈಗಾಗಲೇ ಪೊಲೀಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ" ಎಂದು ತಿಳಿಸಿದರು.
"ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಜಲ್ಲಿ ಕ್ವಾರಿ ಸಮಸ್ಯೆ, ಮರಳು ಹಾಗೂ 94 ಸಿ ಮುಂತಾದ ಸಮಸ್ಯೆಗಳ ಬಗ್ಗೆ ಸಭೆ ನಡೆಸಿದ್ದೇನೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಕಲ್ಲು ಕ್ವಾರಿಗಳ ಸಮಸ್ಯೆಗಳನ್ನು ನಿವಾರಿಸಲು ತೀರ್ಮಾನ ಕೈಗೊಂಡಿದ್ದೇವೆ" ಎಂದರು.
"ಭದ್ರಾವತಿ ಸೇರಿಸಿಕೊಂಡು ಶಿವಮೊಗ್ಗ ಕಮಿಷನರೇಟ್ ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ" ಎಂದು ತಿಳಿಸಿದರು.