ಬೆಳಗಾವಿ, ಆ 21 (DaijiworldNews/PY): ಧಾರವಾಡ ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಈ ಸಂದರ್ಭ ಅಭಿಮಾನಿಗಳು ಸೇಬು ಹಾರ ಹಾಕಿ ಅದ್ದೂರಿಯಿಂದ ಬರಮಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜೈಲಿನ ಹೊರ ಭಾಗದಲ್ಲಿ ಕಾಯುತ್ತಾ ನಿಂತಿದ್ದು, ವಿನಯ್ ಅವರು ಹೊರಬರುತ್ತಿದ್ದಂತೆ ವಿನಯ್ ಅವರಿಗೆ ರಾಖಿ ಕಟ್ಟಿ ಅಣ್ಣನನ್ನು ಸ್ವಾಗತಿಸಿ ರಕ್ಷಾ ಬಂಧನ ಆಚರಿಸಿದರು.
ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ಅಭಿಮಾನಿಗಳು ಬಂದಿದ್ದು, ಸೇಬು ಹಾರ, ಗುಲಾಬಿ ಹಾರ ಹಾಕಿ ಸ್ವಾಗತಿಸಿದರು. ವಿನಯ್ ಕುಲಕರ್ಣಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದರು. ಜನರು ಕೊರೊನಾ ನಿಯಮ ಉಲ್ಲಂಘಿಸಿ ಜನ ಸೇರಿದ್ದರು.
ಈ ವೇಳೆ ಮಾತನಾಡಿದ ವಿನಯ್ ಕುಲಕರ್ಣಿ, "ಜಾಮೀನು ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆಗಳು. ನಾನು ಜೈಲಿನಲ್ಲಿ ಸಾಕಷ್ಟು ಓದಲು ಕಲಿತಿದ್ದೇನೆ. ಜೀವನದ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಇನ್ನು ಮುಂದೆ ಬೇರೆಯದೇ ರೀತಿಯ ರಾಜಕಾರಣಿಯಾಗುತ್ತೇನೆ" ಎಂದಿದ್ದಾರೆ.
"ನಾನೇ ಬೇರೆ, ಸಂಘಟನೆಗಳೇ ಬೇರೆ. ನನ್ನ ಜೀವನವೇ ಬೇರೆ. ನನ್ನೊಂದಿಗೆ ಎಲ್ಲಾ ಸಮಾಜದ ವರ್ಗದ ಜನ ಇದ್ದಾರೆ" ಎಂದು ಹೇಳಿದ್ದಾರೆ.