ಬೆಂಗಳೂರು, ಆ 21 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದು, ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.
ಸೆಪ್ಟೆಂಬರ್ನಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಸಿದ್ದರಾಮಯ್ಯ ಅವರು ಶನಿವಾರವೇ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಲಿದ್ದು, ಆಗಸ್ಟ್ 31ರಂದು ಅವರು ಅಲ್ಲಿಂದ ವಾಪಾಸ್ಸಾಗಲಿದ್ದಾರೆ.
"ನಾನು ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಹೋಗುತ್ತಿದ್ದೇನೆ. ನೆಲಮಂಗಲ ಬಳಿಯ ಜಿಂದಾಲ್ ಪ್ರಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಹತ್ತು ದಿನಗಳ ಕಾಲ ಮನೆಯಲ್ಲಿ ಇರುವುದಿಲ್ಲ" ಎಂದಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೆಹರು ಹಾಗೂ ವಾಜಪೇಯಿ ಕುರಿತ ಹೇಳಿಕೆ ವಿಚಾರದಲ್ಲಿ ಸಿ.ಟಿ ರವಿ ಅವರಿಗೆ ಜ್ಞಾನೋದಯ ಆಗುವುದು ಉತ್ತಮ" ಎಂದು ಹೇಳಿದ್ದಾರೆ.