ನವದೆಹಲಿ, ಆ 21 (DaijiworldNews/MS): ರಾಷ್ಟ್ರ ರಾಜಧಾನಿಯಲ್ಲಿರುವ ಸುಪ್ರೀಂಕೋರ್ಟ್ ಮುಂಭಾಗದಲ್ಲಿ ದಂಪತಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರಂದು ಶನಿವಾರ ತಿಳಿದುಬಂದಿದೆ.
ಆ.16 ರಂದು ಮಧ್ಯಾಹ್ನ 12.20 ರ ಸುಮಾರಿಗೆ ಭಗವಾನ್ ದಾಸ್ ರಸ್ತೆಯಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್ ಹೊರಗೆ ಈ ಘಟನೆ ನಡೆದಿತ್ತು. ಗಂಡ-ಹೆಂಡತಿ ಇಬ್ಬರೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ದಂಪತಿಗಳು ಬೆಂಕಿ ಹಚ್ಚಿಕೊಂಡ ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಬೆಂಕಿ ನಂದಿಸಿ, ಪೊಲೀಸ್ ವ್ಯಾನ್ನಲ್ಲಿ ರಾಮ್ ಮನೋಹರ್ ಲೂಹಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ದಂಪತಿಗಳಿಬ್ಬರೂ ಸಾಕಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾನೆಂದು ವರದಿಗಳು ತಿಳಿಸಿವೆ. ಇಬ್ಬರನ್ನು ಇದುವರೆಗೂ ಗುರುತಿಸಲಾಗಿಲ್ಲ, ಮತ್ತು ಅವರ ಕ್ರಮದ ಹಿಂದಿನ ಕಾರಣವನ್ನು ಕಂಡುಹಿಡಿಯಲು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.