ನವದೆಹಲಿ, ಆ 21 (DaijiworldNews/PY): "ವಯಸ್ಕರು ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಬಳಸಲು ಭಾರತದ ಝೈಡಸ್ ಕ್ಯಾಡಿಲಾ ಕಂಪೆನಿ ಅಭಿವೃದ್ದಿಪಡಿಸಿರುವ ಕೊರೊನಾ ಲಸಿಕೆ ಝೈಕೋವ್-ಡಿ ಗೆ ಭಾರತೀಯ ಪ್ರಧಾನಿ ಔಷಧ ನಿಯಂತ್ರಕ ಅನುಮತಿ ನೀಡಿದೆ" ಎಂದು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ತಿಳಿಸಿದೆ.
"ಝೈಕೋವ್-ಡಿ ದೇಶೀಯವಾಗಿ ಅಭಿವೃದ್ದಿಯಾಗಿದ್ದು, ಡಿಎನ್ಎ ಆಧಾರಿತ ಲಸಿಕೆಯಾಗಿದೆ. ಈ ಲಸಿಕೆಗಳನ್ನು ಮೂರು ಡೋಸ್ಗಳಲ್ಲಿ ನೀಡಲಾಗುವುದು. ಮನುಷ್ಯನ ದೇಹದಲ್ಲಿ ಈ ಲಸಿಕೆ ಸಾರ್ಸ್ ಕೋವ್-2 ವೈರಾಣುವಿನ ಸ್ಪೈಕ್ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ. ಕೊರೊನಾದಿಂದಲೂ ಕೂಡಾ ಈ ಲಸಿಕೆ ರಕ್ಷಣೆ ನೀಡುತ್ತದೆ ಹಾಗೂ ವೈರಾಣುಗಳನ್ನು ಕೂಡಾ ನಾಶ ಮಾಡುತ್ತದೆ" ಎಂದು ಕಂಪೆನಿ ಹೇಳಿದೆ.
"ಈ ಲಸಿಕೆ ಡಿಎನ್ಎ ಆಧಾರಿತ ಲಸಿಕೆಯಾಗಿರುವುದರಿಂದ, ಕೊರೊನಾ ವೈರಸ್ನ ವಿವಿಧ ರೂಪಾಂತರ ತಳಿಗಳ ವಿರುದ್ದ ಹೋರಾಡಲು ಮಾರ್ಪಾಡು ಮಾಡಬಹುದಾಗಿದೆ. ಕೊರೊನಾ ವಿರುದ್ದ ಹೋರಾಟದಲ್ಲಿ ಈ ಲಸಿಕೆ ಮಹತ್ವದ ಪಾತ್ರ ವಹಿಸಲಿದೆ" ಎಂದು ಜೈವಿಕ ತಂತ್ರಜ್ಞಾನ ಇಲಾಖೆ ಮಾಹಿತಿ ನೀಡಿದೆ.
"ಈ ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆಯ ಕೊರೊನಾ ಸುರಕ್ಷಾ ಕಾರ್ಯಕ್ರಮದಡಿ ಝೈಡಸ್ ಕ್ಯಾಡಿಲಾ ಕಂಪೆನಿ ಅಭಿವೃದ್ದಿಪಡಿಸಿದೆ. ಕಂಪೆನಿಯು ವಾರ್ಷಿಕ 10-12 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ತಿಳಿಸಿದೆ.
ತನ್ನ ಕೊರೊನಾ ಲಸಿಕೆಯನ್ನು 12-17 ವರ್ಷದ ಮಕ್ಕಳಿಗೆ ನೀಡಲು ಅನುಮತಿ ಕೋರಿ ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಪತ್ರ ಬರೆದಿದೆ.
"ಮಕ್ಕಳಿಗೆ ಲಸಿಕೆ ಹಾಕಲು ಅನುಮತಿ ಕೋರಿದ್ದೇವೆ. ವಿಶ್ವದ ಬಹುತೇಕ ದೇಶಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿಲ್ಲ. ಈ ಹಿನ್ನೆಲೆ ಮಕ್ಕಳೆಗೆ ಲಸಿಕೆ ಹಾಕುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಮಕ್ಕಳಿಗೂ ಕೂಡಾ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳಲು ನಾವು ಬದ್ದರಾಗಿದ್ದೇವೆ" ಎಂದು ತಿಳಿಸಿದೆ.