ಬೆಂಗಳೂರು, ಆ 21 (DaijiworldNews/PY): "ಶಾಲಾರಂಭಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲಾರಂಭದ ದಿನ ಬೆಂಗಳೂರಿನ ಕೆಲವು ಶಾಲೆಗಳಿಗೆ ನಾನು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸುತ್ತೇನೆ" ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
"ನನ್ನೊಂದಿಗೆ ಶಿಕ್ಷಣ ಸಚಿವರೂ ಇರುತ್ತಾರೆ. ಶಾಲೆಗಳಿಗೆ ಸ್ಯಾನಿಟೈಸಿಂಗ್, ಶಿಕ್ಷಕರು, ಶಾಲಾ ಸಿಬ್ಬಂದಿಗಳು ಲಸಿಕೆ ಪಡೆಯುವುದು ಕಡ್ಡಾಯ. ಮಕ್ಕಳು ಪೋಷಕರ ಸಮ್ಮತಿ ಪಡೆದು ಶಾಲೆಗೆ ಬರಬೇಕು. ಮಕ್ಕಳು ಯಾವುದೇ ರೀತಿಯಾದ ಆತಂಕವಿಲ್ಲದೇ ಶಾಲೆಗೆ ಬರಬಹುದು. ಮಕ್ಕಳ ವಿದ್ಯಾಭ್ಯಾಸದ ನಿಟ್ಟಿನಲ್ಲಿ ಹಂತಹಂತವಾಗಿ ಶಾಲೆ ಆರಂಭ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಇಂದು ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ಬಳ್ಳಾರಿಗೆ ಪ್ರವಾಸ ಕೈಗೊಂಡಿದ್ದು, ಬಳ್ಳಾರಿಯಿಂದ ರಸ್ತೆ ಮಾರ್ಗ ಮೂಲಕ ಆಲಮಟ್ಟಿಯ ಕೃಷ್ಣ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಸಿಎಂ ಬೊಮ್ಮಯಿ ಅವರೊಂದಿಗೆ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಉಮೇಶ್ ಕತ್ತಿ ಹಾಗೂ ಮುರುಗೇಶ್ ನಿರಾಣಿ ಕೂಡಾ ತೆರಳಲಿದ್ದಾರೆ. ನಂತರ ಬೆಳಗಾವಿಯಲ್ಲಿ ಕೊರೊನಾ ಸಭೆ ನಡೆಸಲಿದ್ದಾರೆ.
ಆಗಸ್ಟ್ 23ರಿಂದ ಶಾಲೆ ಪ್ರಾರಂಭಿಸುವುದಾಗಿ ಈ ಹಿಂದೆ ಸಿಎಂ ಬೊಮ್ಮಾಯಿ ಹೇಳಿದ್ದರು. ಕೊರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಲು ಅನುಮತಿ ಕಲ್ಪಿಸಲಾಗಿದೆ.