ನವದೆಹಲಿ, ಆ. 20 (DaijiworldNews/SM): 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಸಿದ್ಧತೆಯನ್ನು ನಡೆಸಲು ಮುಂದಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ವ್ಯವಸ್ಥಿತವಾಗಿ ಸಿದ್ಧತೆ ಆರಂಭಿಸಬೇಕು ಎಂದಿದ್ದಾರೆ.
ಈ ವಿಚಾರ ಚರ್ಚಿಸಲು 19 ವಿರೋಧ ಪಕ್ಷಗಳ ಮುಖಂಡರೊಂದಿಗೆ ಶುಕ್ರವಾರ ಸೋನಿಯಾ ಗಾಂಧಿ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, 'ಸಂವಿಧಾನದ ಆಶಯ-ತತ್ವಗಳಲ್ಲಿ ನಂಬಿಕೆ ಹೊಂದಿರುವಂತಹ ಸರ್ಕಾರ ರಚನೆಯೇ ನಮ್ಮ ಗುರಿಯಾಗಿರಬೇಕು' ಎಂದಿದ್ದಾರೆ. ಮುಂದಿನ ಚುನಾವಣೆ ಗೆಲ್ಲುವುದು ಸವಾಲಿನ ವಿಚಾರವಾಗಿದೆ. ನಾವೆಲ್ಲರು ಒಗ್ಗಟ್ಟಿನಿಂದ ಹೋರಾಡಿದರೆ ಇದು ಸಾಧ್ಯ ಎಂದಿದ್ದಾರೆ.
ಇನ್ನು ಸಭೆಯಲ್ಲಿ ಕೇಂದ್ರದ ವಿರುದ್ಧ ಹಲವು ವಿಚಾರಗಳನ್ನು ಸೋನಿಯಾ ಗಾಂಧಿ ಪ್ರಸ್ತಾಪಿಸಿದರು. ಸದ್ಯ ಮೋದಿ ಸರಕಾರದ ಕೆಲವೊಂದು ಹಗರಣಗಳು ಹಾಗೂ ನಿಯಮಗಳ ಬಗ್ಗೆ ಚರ್ಚೆ ನಡೆಯಿತು.