ಮಂಗಳೂರು, ಆ.20 (DaijiworldNews/HR): ಅಫ್ಘಾನಿಸ್ಥಾನದಲ್ಲಿ ಸಿಲುಕಿಹಾಕಿಕೊಂಡಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ವ್ಯವಸ್ಥೆಯಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಮೇಶ್ ಅವರನ್ನು ರಾಜ್ಯದಿಂದ ನೋಡಲ್ ಆಫೀಸರ್ ಆಗಿ ನೇಮಕ ಮಾಡಿದ್ದು, ಅವರು ಈ ಹಿಂದೆ ವಿದೇಶದಲ್ಲಿ ಅತಂತ್ರರಾಗಿದ್ದ ಕನ್ನಡಿಗರನ್ನು ಕರೆ ತಂದಿದ್ದಾರೆ. ಸಂಕಷ್ಟದಲ್ಲಿರುವವರು ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ" ಎಂದರು.
ಇನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರ ಜನಾಶೀರ್ವಾದ ಯಾತ್ರೆಯನ್ನು ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅನೇಕ ಕಡೆಗಳಲ್ಲಿ ಈ ರೀತಿ ಆಗುತ್ತದೆ. ಇದು ಸರಿಯಾ ಎಂದರೆ, ಖಂಡಿತ ತಪ್ಪು" ಎಂದು ಹೇಳಿದ್ದಾರೆ.