ಬೆಂಗಳೂರು, ಆ 20 (DaijiworldNews/PY): "ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಭವನದಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ, ದಿವಂಗತ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಬಿಜೆಪಿ ಒಬಿಸಿಗೆ ಮೀಸಲಾತಿ ಕೊಟ್ಟಿದ್ದಾರೆ. ಇಲ್ಲದೇ ಇದ್ದರೆ, ಕಂಟೆಂಟ್ ಆಫ್ ಕೋರ್ಟ್ ಆಗುತಿತ್ತು. ಈ ಕಾರಣಕ್ಕೆ ಅವರು ಹೆದರಿ ಮೀಸಲಾತಿ ತಂದಿದ್ದಾರೆ" ಎಂದಿದ್ದಾರೆ.
"ನಾವು ಈ ಹಿಂದೆಯೇ ಮೀಸಲಾತಿ ತಂದಿದ್ದೆವು. ಇದಕ್ಕೆ ಬಿಜೆಪಿಯ ರಾಮಜೋಯಿಸ್ ಕೋರ್ಟ್ನಲ್ಲಿ ತಡೆ ಹಾಕಿದ್ದರು. ಆಗ ಕೇಸ್ ಕೂಡಾ ಬಿದ್ದು ಹೋಗಿತ್ತು. ಇದೀಗ ಕೋರ್ಟ್ಗೆ ಹೆದರಿ ಮೀಸಲಾತಿ ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ತಂದಿದ್ದಾರೆ. ಇದೀಗ ನಾವು ಮೀಸಲಾತಿ ಜಾರಿಗೆ ತಂದಿದ್ದು ಎಂದು ಹೇಳುತ್ತಿದ್ದಾರೆ" ಎಂದಿದ್ದಾರೆ.
"ಬಿಜೆಪಿಗರು ಮೋಸಗಾರರು. ಜನರಿಗೆ ಸುಳ್ಳುಗಳನ್ನು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳಿ, ಇತಿಹಾಸ ತಿರುಚುವಲ್ಲಿ ಬಿಜೆಪಿಗರು ನಿಸ್ಸೀಮರು. ಬಿಜೆಪಿ ಕೇವಲ ಭ್ರಷ್ಟ ಪಕ್ಷವಲ್ಲ. ಆ ಪಕ್ಷದ ನಾಯಕರು ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಮೀಸಲು ಸೌಲಭ್ಯದ ವಿರೋಧಿಗಳು" ಎಂದು ಹೇಳಿದ್ದಾರೆ.
"ಈ ವಿಚಾರ ಬಿಜೆಪಿಯ ಹಿಂದುಳಿದ ನಾಯಕರಿಗೆ ಅರ್ಥವಾಗುತ್ತಿಲ್ಲ. ಮೀಸಲಾತಿ ಪರ ಎಂದಾದರೂ ಬಿಜೆಪಿಗರು ಮಾತನಾಡಿದ್ದಾರೆಯೇ?. ಮೀಸಲಾತಿ ಕುರಿತು ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕು ಇದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಮೋದಿಯವರಿಗೆ ನಾಚಿಕೆ ಆಗುವುದಿಲ್ಲವೇ?. ಇಡೀ ಸಮಾಜದ ಹಾಗೂ ಎಲ್ಲಾ ಧರ್ಮದವರು, ಜಾತಿ ಜನಾಂಗವನ್ನು ಒಳಗೊಂಡಿರುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್" ಎಂದಿದ್ದಾರೆ.