ನಾಗ್ಪುರ, ಆ 20 (DaijiworldNews/PY): "ಮಹಾರಾಷ್ಟ್ರದ ನಾಗ್ಪುರದಲ್ಲಿ 10 ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಯುವಕ ಇದೀಗ ಅಫ್ಗಾನಿಸ್ತಾನದ ತಾಲಿಬಾನ್ ಉಗ್ರರೊಂದಿಗೆ ಕಾಣಿಸಿಕೊಂಡಿದ್ದು, ಕೈಯಲ್ಲಿ ರೈಫಲ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
"ಕಳೆದ ಹತ್ತು ವರ್ಷಗಳಿಂದ 30 ವರ್ಷದ ನೂರ್ ಮೊಹಮ್ಮದ್ ಅಜೀಜ್ ಮೊಹಮ್ಮದ್ ನಾಗ್ಪುರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ. ಈತ ನಗರದ ದಿಗೋರಿ ಏರಿಯಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ, ಆತನ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಆತನನ್ನು ಬಂಧಿಸಿ ಜೂನ್ 23ರಂದು ಅಫ್ಗಾನಿಸ್ತಾನಕ್ಕೆ ಗಡಿಪಾರು ಮಾಡಿದ್ದರು" ಎಂದು ಮಾಹಿತಿ ನೀಡಿದ್ದಾರೆ.
"ನೂರ್ ಮೊಹಮ್ಮದ್ ಅನ್ನು ಗಡಿಪಾರು ಮಾಡಿದ ಬಳಿ ಆತ ತಾಲಿಬಾನ್ ಸೇರಿಕೊಂಡಿದ್ದಾನೆ ಎಂದೆನಿಸುತ್ತದೆ. ರೈಫಲ್ ಹಿಡಿದುಕೊಂಡಿರುವ ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ" ಎಂದಿದ್ದಾರೆ.
2010ರಲ್ಲಿ ಭಾರತಕ್ಕೆ ಆರು ತಿಂಗಳ ವೀಸಾ ಮೇಲೆ ಬಂದಿದ್ದ ನೂರ್ ಮೊಹಮ್ಮದ್ ಕೆಲಸಕ್ಕಗಿ ಅಲೆದಾಡಿದ್ದ. ನಂತರ ವೀಸಾ ಅವಧಿ ಅಂತ್ಯವಾಗುತ್ತಿದ್ದಂತೆ ಆತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಅರ್ಜಿ ಸಲ್ಲಿಸಿದ್ದ. ನಿರಾಶ್ರಿತ ತಾಣದಲ್ಲಿ ತನಗೆ ಆಶ್ರಯ ನೀಡಬೇಕು ಎಂದು ಕೋರಿದ್ದ. ಆದರೆ, ಆತನ ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ನಾಗ್ಪುರದಲ್ಲೇ ಉಳಿದುಕೊಂಡದ್ದ ನೂರ್ ಮೊಹಮ್ಮದ್ ಗಡಿಪಾರಾದ ಬಳಿಕ ಕಾಣಿಸಿಕೊಂಡಿರಲಿಲ್ಲ. ಇದೀಗ ತಾಲಿಬಾನ್ ಉಗ್ರರೊಂದಿಗೆ ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡಿದ್ದಾನೆ.