ಬೆಂಗಳೂರು, ಆ 20 (DaijiworldNews/PY): "ಹಿಂದುಳಿದ ವರ್ಗ ಸೇರಿದಂತೆ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಾತ್ಮಕವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉನ್ನತೀಕರಣಕ್ಕೆ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ನೇತಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 106ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ತುಳಿತಕ್ಕೊಳಗಾದ ಸಮುದಾಯಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು, ಜಾಗತಿಕ ಮಟ್ಟದ ಶಿಕ್ಷಣ ತರಬೇತಿ ಹಾಗೂ ಕೌಶಲ ಪಡೆದುಕೊಳ್ಳಲು ಈ ವಿಶೇಷ ಕಾರ್ಯಕ್ರಮ ಸಹಾಯವಾಗಲಿದೆ" ಎಂದಿದ್ದಾರೆ.
"ದೇವರಾಜ ಅರಸು ಅವರು, ತಮ್ಮ ಅಧಿಕಾರದ ಅವಧಿಯ ಸಂದರ್ಭ ಕ್ಲಿಷ್ಟಕರ ತೀರ್ಮಾನಗಳನ್ನು ಕೈಗೊಂಡ ಧೀಮಂತ ನಾಯಕ. ಅವರು, ಭೂಸುಧಾರಣಾ ಕಾಯ್ದೆ ಜಾರಿ ಸೇರಿದಂತೆ, ಆಡಳಿತದಲ್ಲಿ ಕನ್ನಡ ಭಾಷೆ, ಸಾಮಾಜಿಕ ನ್ಯಾಯ, ಕರ್ನಾಟಕ ಎನ್ನುವ ಹೆಸರು ನಾಮಕರಣ ಹೀಗೆ ಹಲವು ಕ್ರಮಗಳನ್ನು ಜಾರಿಗೆ ತಂದಿದ್ದಾರೆ" ಎಂದು ಶ್ಲಾಘಿಸಿದ್ದಾರೆ.
"ಜಟ್ಟಿಯಾಗಿದ್ದ ಅರಸು ಗಟ್ಟಿ ವ್ಯಕ್ತಿತ್ವದವರು. ಅವರು ನಿರ್ಲಕ್ಷಿತ ಸಣ್ಣ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿ, ರಾಜಕೀಯ ಅಧಿಕಾರದ ಭಾಗವಾಗವಾಗುವಂತೆ ನೋಡಿಕೊಂಡವರು. ದೇವರಾಜ ಅರಸು ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ ಎಂದಾಗ ಅಧಿಕಾರ ತ್ಯಜಿಸಿದರು" ಎಂದಿದ್ದಾರೆ.