ಮುಂಬೈ, ಆ 20 (DaijiworldNews/PY): "ಮುಸ್ಲಿಂ ಮಹಿಳೆಯರ ಹಾಗೂ ಅವರ ಸಮುದಾಯದ ರಕ್ಷಣೆಗೋಸ್ಕರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸುವುದು ಸೂಕ್ತ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಅಫ್ಗಾನ್ ಬಿಕ್ಕಟ್ಟು ಬಗ್ಗೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಮುಸ್ಲಿಂ ಮಹಿಳೆಯರು ಹಾಗೂ ಅವರ ಸಮುದಾಯವನ್ನು ರಕ್ಷಿಸಲು ಓವೈಸಿ ಅವರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ" ಎಂದಿದ್ದಾರೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಓವೈಸಿ, "ಭಾರತದಲ್ಲಿ ಪ್ರತಿ ಒಂಭತ್ತು ಹೆಣ್ಣು ಮಕ್ಕಳಲ್ಲಿ ಒಂದು ಮಗುವು ಐದು ವರ್ಷಕ್ಕಿಂತ ಒಳಗೆ ಸಾವನ್ನಪ್ಪುತ್ತಿದ್ದು, ಮಹಿಳೆಯರ ವಿರುದ್ಧ ಇಲ್ಲಿ ದೌರ್ಜನ್ಯ ಹಾಗೂ ಅಪರಾಧಗಳು ಹೆಚ್ಚಿವೆ. ಆದರೆ ಕೇಂದ್ರ ಇಲ್ಲಿಯದನ್ನು ಬಿಟ್ಟು ಅಫ್ಗಾನಿಸ್ತಾನದ ಮಹಿಳೆಯರಿಗೆ ಏನಾಗುತ್ತಿದೆ ಎಂದು ಚಿಂತೆ ಮಾಡುತ್ತಿದೆ. ಇಲ್ಲಿ ಹಾಗಾಗುತ್ತಿಲ್ಲವೇ?" ಎಂದು ಕೇಳಿದ್ದರು.
"ಅಫ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದ್ದರಿಂದ ಪಾಕಿಸ್ತಾನಕ್ಕೆ ಹೆಚ್ಚು ಲಾಭವಿದ್ದು, ಐಎಸ್ಐ ಭಾರತದ ಶತ್ರು. ಉಗ್ರ ಸಂಘಟನೆ ಐಎಸ್ಐ ತಾಲಿಬಾನ್ ನಿಯಂತ್ರಿಸುತ್ತದೆ ಮತ್ತು ಅದನ್ನು ಕೈಗೊಂಬೆಯಂತೆ ಬಳಸುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದಿದ್ದರು.