ನವದೆಹಲಿ, ಆ.20 (DaijiworldNews/HR): ಭಾರತೀಯ ಸೇನೆಯಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸಿದ್ದ ಶೇರ್ ಮಹಮ್ಮದ್ ಅಬ್ಬಾಸ್ ಸ್ಟ್ಯಾನಿಕಾಜಿರು ತಾಲಿಬಾನ್ ಉಗ್ರಸಂಘಟನೆಯನ್ನು ಮುನ್ನಡೆಸುತ್ತಿರುವ ರಾಜಕೀಯ ಘಟಕದ ಮುಖ್ಯಸ್ಥ ಎಂಬ ಅಂಶ ಬಹಿರಂಗವಾಗಿದೆ.
ಆಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಕ್ಷಿಪ್ರಕಾರ್ಯಾಚರಣೆ ನಡೆಸಿರುವ ತಾಲಿಬಾನಿಗಳ ಪೈಕಿ ಮೊಹಮ್ಮದ್ ಅಬ್ಬಾಸ್ ಕೂಡ ಒಬ್ಬರು.
ಮೊಹಮ್ಮದ್ ಅಬ್ಬಾಸ್ ಭಾರತೀಯ ಸೇನೆಯಲ್ಲಿ ಅವರು ಕೆಲಸ ಮಾಡುವಾಗ ಸಹೋದ್ಯೋಗಿಗಳು ಅವರನ್ನು ಶೇರು ಎಂದು ಕರೆಯುತ್ತಿದ್ದರು. ಭಾರತೀಯ ಸೇನೆ ಆಫ್ಘಾನಿಸ್ತಾನದವರಿಗಾಗಿ ಬಾಗಿಲುಗಳನ್ನು ತೆರೆದಿಟ್ಟಾಗ 1982ರಲ್ಲಿ ಶೇರು ಸೇರ್ಪಡೆಯಾಗಿದ್ದರು. ಡೆಹರಾಡೂನ್ನ ತರಬೇತಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಾಲ ತರಬೇತಿ ಪಡೆದಿದ್ದರು. ಆಗ ಅವರಿಗೆ 20 ವರ್ಷ ವಯಸ್ಸಾಗಿತ್ತು.
ಸೇನಾಧಿಕಾರಿ ಖೇಹರ್ಸಿಂಗ್ ಶೇಖಾವತ್ ಎಂಬವರು ಮೊಹಮ್ಮದ್ ಅಬ್ಬಾಸ್ ಬಗ್ಗೆ ಮಾತನಾಡಿದ್ದು, "ನನ್ನ ಬಳಿ ಈಗಲೂ ಆತನೊಂದಿಗಿನ ಫೋಟೋಗಳಿದ್ದು, ಆತ ನೀರಿನಲ್ಲಿ ಮೀನಿಗಿಂತಲೂ ವೇಗವಾಗಿ ಈಜುತ್ತಿದ್ದ. ಉತ್ತಮ ಸ್ನೇಹಿತನಾಗಿದ್ದ. ಭಾರತೀಯ ಸೇನೆ ಸೇರಿದ ಬಳಿಕ ಶೇರು ಆಫ್ಘಾನ್ ರಾಷ್ಟ್ರೀಯ ಸೇನೆಯ ಲೆಫ್ಟಿನೆಂಟ್ ಆಗಿ ಸೇರಿಕೊಂಡಿದ್ದರು. ಸೋವಿಯತ್ ಆಫ್ಘನ್ ಮಹಾಯುದ್ಧ, ಇಸ್ಲಾಮಿಕ್ ಲಿಬರೇಷನ್ ಆಫ್ ಆಫ್ಘಾನಿಸ್ತಾನ್ ಯುದ್ಧಗಳಲ್ಲಿ ಹೋರಾಟ ಮಾಡಿದ್ದರು" ಎಂದು ತಿಳಿಸಿದ್ದಾರೆ.