ಬೆಂಗಳೂರು, ಆ.20 (DaijiworldNews/HR): ವಿದ್ಯುತ್- ಟೆಲಿಫೋನ್ ಇಲ್ಲದ ರೈತ ಕುಟುಂಬದಿಂದ ಬಂದ ನನಗೆ ಬಿಜೆಪಿಯು ಬಹಳಷ್ಟು ಕೊಟ್ಟಿದ್ದು, ವಿಧಾನ ಪರಿಷತ್ ಸದಸ್ಯೆ, ಶಾಸಕಿ, ರಾಜ್ಯದಲ್ಲಿ ಸಚಿವೆಯಾಗುವ ಅವಕಾಶ ಹಾಗೂ ಎರಡು ಬಾರಿ ಸಂಸದರನ್ನಾಗಿ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಉಡುಪಿ ಚಿಕ್ಕಮಗಳೂರು ನನ್ನ ತವರು ಕ್ಷೇತ್ರವಲ್ಲ. ಆದರೂ ಜನ ನನ್ನ ಬೆಂಬಲಿಸಿದ್ದಾರೆ.ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಉನ್ನತ ಸ್ಥಾನಕ್ಕೆ ಏರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ" ಎಂದರು.
ಇನ್ನು ಮೋದಿ ಸಂಪುಟದಲ್ಲಿ 27 ಜನ ಹಿಂದುಳಿದ ವರ್ಗದವರು, 11 ಮಂದಿ ಮಹಿಳೆಯರಿದ್ದಾರೆ. ಯುವಕರಿಗೆ ದಲಿತರಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಭಯವಾಗುತ್ತಿದ್ದು, ಇದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಒಂದು ದಿನವೂ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ನೆರೆ, ಬರ, ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ" ಎಂದು ಆರೋಪಿಸಿದರು.
"ಕೃಷಿ ಇಲಾಖೆ ಅತ್ಯಂತ ದೊಡ್ಡ ಇಲಾಖೆ. ಹೆಚ್ಚು ಸಮಸ್ಯೆ ಇರುವ ಇಲಾಖೆ. ಶೇ 70 ರಷ್ಟು ಜನರು ಕೃಷಿ ಮಾಡುತ್ತಾರೆ. ಅವರಲ್ಲಿ ಶೇ 80 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು. ರೈತರು ಕೃಷಿಯಿಂದ ಲಾಭವಿಲ್ಲ ಎಂದು ಜಮೀನು ಮಾರಾಟ ಮಾಡುತ್ತಿದ್ದಾನೆ. ಕೃಷಿಕ ಕೃಷಿ ಮಾಡಬೇಕು, ಕೃಷಿಯಲ್ಲಿಯೇ ಅಭಿವೃದ್ದಿಯಾಗಬೇಕು ಎಂದು ಮೋದಿ ಆಶಯ" ಎಂದು ಹೇಳಿದ್ದಾರೆ.