ಬೆಂಗಳೂರು, ಆ 20 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದ ಯಾವ ಪಕ್ಷದಲ್ಲಿಯೂ ಪ್ರಧಾನಿ ಮೋದಿ ಅವರಿಗೆ ಸರಿಸಮನಾದ ನಾಯಕರಿಲ್ಲ" ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್, ದಶಕಗಳಿಂದ ದೇಶ ಹಾಗೂ ರಾಜ್ಯವನ್ನು ಆಳಿದೆ. ಆದರೆ, ಅಭಿವೃದ್ಧಿಗೆ ಏನೂ ಮಾಡಿಲ್ಲ. ಬೆಂಗಳೂರಿಗಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮೆಟ್ರೋ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ದೊಡ್ಡದಾದ ಯೋಜನೆಗಳನ್ನು ಮಾಡಿದೆ. ಬೆಂಗಳೂರಿಗೆ ನರೇಂದ್ರ ಮೋದಿ ಸರ್ಕಾರವು ಸುಮಾರು 17 ಕೋಟಿ ಮೊತ್ತದ ಉಪ ನಗರ ರೈಲು ಯೋಜನೆಯನ್ನು ಮಂಜೂರು ಮಾಡಿದೆ" ಎಂದು ತಿಳಿಸಿದ್ದಾರೆ.
"ಈಗಾಗಲೇ ಎಲ್ಲಾ ರಾಜ್ಯಗಳಲ್ಲಿಯೂ ಕಾಂಗ್ರೆಸ್ ತನ್ನ ಹಿಡತವನ್ನು ಕಳೆದುಕೊಳ್ಳುತ್ತಿದೆ. ನಿಧಾನವಾಗಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು, ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ" ಎಂದಿದ್ದಾರೆ.
"ಈಗ ಕಾಂಗ್ರೆಸ್ಗಿಂತ ಅದೆಷ್ಟೋ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಅಮೇರಿಕಾದಂತಹ ದೇಶವು ಹೆಣಗಾಡುತ್ತಿರುವಾಗ, ಮೋದಿ ಸರ್ಕಾರವು ಅಂತಹ ಕಠಿಣ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದೆ. ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕೆ ನಾವು ಈಗಾಗಲೇ ಅಗತ್ಯವಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಡಿಸೆಂಬರ್ ವೇಳೆಗೆ ನಾವು ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.