ಬೆಂಗಳೂರು, ಆ 20 (DaijiworldNews/PY): "ಜನತೆ ಹಬ್ಬದ ಸಂಭ್ರಮದಲ್ಲಿ ಮೈಮರೆಯಬೇಡಿ. ಕೊರೊನಾ ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಮುಂದೆಯೂ ಕೂಡಾ ಜನತೆ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವುದು ಮುಖ್ಯ. ಮಾರುಕಟ್ಟೆಗಳಲ್ಲಿ ಹೆಚ್ಚು ಜನಸಂದಣಿ ಆಗದಂತೆ ಜನರು ಸ್ವಯಂನಿಯಂತ್ರಣ ಹಾಕಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಹಬ್ದ ಸಂಭ್ರಮದಲ್ಲಿ ಜನರು ಮೈಮರೆಯಬೇಡಿ. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹೆಚ್ಚಿನ ಜನ ಸೇರುವುದು ಬೇಡ. ಕೊರೊನಾ ನಿಯಮವನ್ನು ಪಾಲಿಸಿ ಹಬ್ಬ ಆಚರಿಸಿ" ಎಂದು ಮನವಿ ಮಾಡಿದ್ದಾರೆ.
"ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 36,571 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ನಡುವೆ 36,555 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಒಟ್ಟು 3,15,61,635 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 540 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು 4,33,589 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.