ಹೈದರಾಬಾದ್, ಆ.20 (DaijiworldNews/HR): ಮೊದಲು ಭಾರತದಲ್ಲಿ ವಾಸಿಸಿರುವ ಅಲ್ಪಸಂಖ್ಯಾತರ ಮೇಲೆ ಗಮನ ಹರಿಸಿ ಎಂದು ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಭಾರತದಲ್ಲಿ ಪ್ರತಿ ಒಂಬತ್ತು ಹೆಣ್ಣು ಮಕ್ಕಳಲ್ಲಿ ಒಂದು ಮಗುವು ಐದು ವರ್ಷಕ್ಕಿಂತ ಒಳಗೇ ಸಾವನ್ನಪ್ಪುತ್ತಿದ್ದು, ಮಹಿಳೆಯರ ವಿರುದ್ಧ ಇಲ್ಲಿ ದೌರ್ಜನ್ಯ ಹಾಗೂ ಅಪರಾಧಗಳು ಹೆಚ್ಚಿವೆ. ಆದರೆ ಕೇಂದ್ರ ಇಲ್ಲಿಯದನ್ನು ಬಿಟ್ಟು ಅಫ್ಘಾನಿಸ್ತಾನದ ಮಹಿಳೆಯರಿಗೆ ಏನಾಗುತ್ತಿದೆ ಎಂದು ಚಿಂತೆ ಮಾಡುತ್ತಿದೆ. ಇಲ್ಲಿ ಹಾಗಾಗುತ್ತಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದ್ದರಿಂದ ಪಾಕಿಸ್ತಾನಕ್ಕೆ ಹೆಚ್ಚು ಲಾಭವಿದ್ದು, ಐಎಸ್ಐ ಭಾರತದ ಶತ್ರು. ಉಗ್ರ ಸಂಘಟನೆ ಐಎಸ್ಐ ತಾಲಿಬಾನ್ ನಿಯಂತ್ರಿಸುತ್ತದೆ ಮತ್ತು ಅದನ್ನು ಕೈಗೊಂಬೆಯಂತೆ ಬಳಸುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದಿದ್ದಾರೆ.