ನವದೆಹಲಿ, ಆ 20 (DaijiworldNews/PY): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಸೂಚಿಸುವ ಅಧಿಕಾರವನ್ನು ರಾಜ್ಯಗಳಿಗೆ ಹಿಂದಿರುಗಿಸುವ ಮಸೂದೆಗೆ ಸಹಿ ಹಾಕಿದ್ದಾರೆ.
ಈ ಮಸೂದೆಯನ್ನು ಆಗಸ್ಟ್ 11ರಂದು ಸಂಸತ್ನಲ್ಲಿ ಅಂಗೀಕರಿಸಲಾಗಿತ್ತು. ಸಂವಿಧಾನದ 105 ನೇ ತಿದ್ದುಪಡಿಯ ಈ ಮಸೂದೆಯನ್ನು ಒಬಿಸಿ ಮಸೂದೆ ಎಂದು ಹೇಳಲಾಗುತ್ತದೆ.
ಕಾನೂನು ಹಾಗೂ ನ್ಯಾಯ ಸಚಿವಾಲಯ ಹೊರಡಿಸಿರುವ ಗೆಝೆಟ್ನ ಪ್ರಕಾರ, ಈ ಕಾಯ್ದೆ ಸಂವಿಧಾನದ ಉಪವಾಕ್ಯದಡಿಯಲ್ಲಿನ ಆರ್ಟಿಕಲ್ 338 ಬಿ ಅನ್ನು ತಿದ್ದುಪಡಿ ಮಾಡಲಿದೆ ಎಂದು ತಿಳಿಸಿತ್ತು.
ಈ ತಿದ್ದುಪಡಿಯ ಮುಖೇನ, ರಾಜ್ಯ ಹಾಗೂ ಕೇಂದ್ರಾಡಳಿತ ಕಾನೂನು ಸಮ್ಮತವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ವರ್ಗಗಳನ್ನು ಗುರುತಿಸಿ ಬಳಿಕ ಪಟ್ಟಿಯನ್ನು ಸಿದ್ದಪಡಿಸುವ ಅಧಿಕಾರವನ್ನು ಪಡೆಯಲಿದ್ದು, ಇದು ಕೇಂದ್ರದ ಪಟ್ಟಿಗಿಂತ ಭಿನ್ನವಾಗಿರಬಹುದು.
ಒಬಿಸಿ ತಿದ್ದುಪಡಿ ಮಸೂದೆಯು ಸಂಸತ್ನ ಉಭಯ ಸದನಗಳಲ್ಲಿಯೂ ಅಂಗೀಕಾರಗೊಂಡಿರುವ ಬಗ್ಗೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದು, "ಇದು ದೇಶದ ಹೆಗ್ಗುರುತಿನ ಕ್ಷಣವಾಗಿದೆ" ಎಂದಿದ್ದರು.