ಅಗರ್ತಲಾ, ಆ 20 (DaijiworldNews/PY): "ತಾಲಿಬಾನ್ಗಳಂತೆ ತೃಣಮೂಲ ಕಾಂಗ್ರೆಸ್ ನಾಯಕರನ್ನು ಎದುರಿಸಬೇಕು" ಎಂದು ತ್ರಿಪುರಾದ ಆಡಳಿತಾರೂಢ ಬಿಜೆಪಿಯ ಶಾಸಕ ಅರುಣ್ ಚಂದ್ರ ಭೌಮಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ರಾಜ್ಯ ಸಚಿವೆಯಾಗಿ ನೇಮಕಗೊಂಡ ಪ್ರತಿಮಾ ಭೌಮಿಕ್ ಅವರನ್ನು ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾ ಹಾಲ್ನಲ್ಲಿ ಸನ್ಮಾನ ಮಾಡುವ ವೇಳೆ ಮಾತನಾಡಿದ ಶಾಸಕ, "25 ವರ್ಷಗಳ ಕಮ್ಯೂನಿಷ್ಟ್ ಸರ್ಕಾರಕ್ಕೆ ಮಂಗಳ ಹಾಡಿ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ಬಿಪ್ಲವ್ ಕುಮಾರ್ ದೇಬ್ ಸರ್ಕಾರವನ್ನು ಟಿಎಂಸಿ ಹಾಳು ಮಾಡಲು ನೋಡುತ್ತಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕುಮ್ಮಕ್ಕಿನಿಂದ ಈ ರೀತಿ ಆಗುತ್ತಿದೆ" ಎಂದಿದ್ದಾರೆ.
"ನೀವು ಅವರನ್ನು ತಾಲಿಬಾನಿ ಶೈಲಿಯಲ್ಲಿ ದಾಳಿ ಮಾಡಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರ ಮೇಲೆ ನೀವು ದಾಳಿ ಮಾಡಬೇಕು. ನಮ್ಮ ರಕ್ತದ ಕೊನೆ ಹನಿ ಇರುವವರೆಗೂ ನಾವು ಬಿಪ್ಲವ್ ಕುಮಾರ್ ಸರ್ಕಾರದ ವಿರುದ್ದ ಹೋರಾಡುತ್ತೇವೆ" ಎಂದು ತಿಳಿಸಿದ್ದಾರೆ.
ಬಿಜೆಪಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಭೌಮಿಕ್ ಅವರ ಹೇಳಿಕೆಗಳು ಅವರ ವೈಯುಕ್ತಿಕವಾಗಿವೆ. ಈ ಹೇಳಿಕೆಗೆ ಅವರೇ ಪೂರ್ಣ ಜವಾಬ್ದಾರರು" ಎಂದು ಹೇಳಿದೆ.