ಬೆಂಗಳೂರು, ಆ.20 (DaijiworldNews/HR): ತಿಂಡ್ಲುವಿನ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ಕೆ ಆನೆಯನ್ನು ಇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ಆನೆಗಳು ಕಾಡಿನಲ್ಲಿ ಇರಬೇಕು, ದೇವಸ್ಥಾನದಲ್ಲಿ ಅಲ್ಲ. ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯ ಆಗುತ್ತದೆ ಎಂದು ಹೇಳಿದೆ.
ಸಾಂಧರ್ಭಿಕ ಚಿತ್ರ
ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಈ ಅರ್ಜಿಯ ವಿಚಾರಣೆಗೆ ಗುರುವಾರ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದೆ. ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆಯೊಂದನ್ನು ತಂದು ಪೋಷಿಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದ ಕಾರಣ ಆನೆಯೂ ಸರ್ಕಾರದ ವಶದಲ್ಲಿದೆ. ಅದನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇಗುಲಗಳಲ್ಲಲ್ಲ ಎಂದು ಹೇಳಿದ್ದು, ಕೇವಲ ಪೂಜಾ ಕಾರ್ಯಕ್ರಮ ನೆರವೇರಿಸಲು ಅದನ್ನು ಬಳಕೆ ಮಾಡಲಾಗುತ್ತಿದ್ದು, ಈ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ ಎಂದು ಅರ್ಜಿದಾರರ ಪರ ವಕೀಲರು ಸಮರ್ಥನೆ ನೀಡಿದರು.
ಇದಕ್ಕೆ ಆಕ್ಷೇಪಿಸಿದ ಪೀಠ, ಹಿಂದಿನ ಕಾಲದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜಾರಿಯಲ್ಲಿರಲಿಲ್ಲ. ಇದೀಗ ಆ ಕಾಯ್ದೆ ಜಾರಿಯಲ್ಲಿದೆ. ಪದ್ಧತಿ ಇತ್ತು ಎಂದು ಮುಂದುವರಿಸುತ್ತೀರಿ ಎನ್ನುವುದಾದರೆ ಒಪ್ಪಲಾಗದು ಎಂದು ಪೀಠ ಹೇಳಿದೆ.