ಕುಶಾಲನಗರ, ಆ 20 (DaijiworldNews/PY): ಕೊರೊನಾ ಸೋಂಕಿಗೆ ಬಲಿಯಾದ ತಾಯಿಯ ಜೊತೆಯಲ್ಲಿ ಅವರ ನೆನಪಿನ ಬುತ್ತಿಯಂತಿದ್ದ ಮೊಬೈಲ್ ಅನ್ನು ಕಳೆದುಕೊಂಡ ದುಃಖದಲ್ಲಿದ್ದ ಹೃತಿಕ್ಷಾಳಿಗೆ ಕೊನೆಗೂ ತಾಯಿಯ ಮೊಬೈಲ್ ಫೋನ್ ಸಿಕ್ಕಿದೆ.
ಆಸ್ಪತ್ರೆಯ ಗೋದಾಮು ಬಳಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಮೊಬೈಲ್ ಅನ್ನು ಆಸ್ಪತ್ರೆಯ ಸಿಬ್ಬಂದಿ ಮಡಿಕೇರಿ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ.
ಗೋದಾಮಿಗೆ ಯಾರು ತಂದು ಹಾಕಿದ್ದಾರೆ ಎನ್ನುವ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹೇಳಿದ್ದಾರೆ.
ಈ ಬಗ್ಗೆ ಹೃತಿಕ್ಷಾ ಪ್ರತಿಕ್ರಿಯೆ ನೀಡಿದ್ದು, ಅಮ್ಮನ ನೆನಪುಗಳಿರುವ ಮೊಬೈಲ್ ಫೋನ್ ವಾಪಾಸ್ಸು ಸಿಕ್ಕಿರುವುದು ಅಮ್ಮನೇ ಮರಳಿ ಬಂದಷ್ಟು ಖುಷಿಯಾಗಿದೆ ಎಂದಿದ್ದಾಳೆ.
ಕುಶಾಲನಗರ ಗುಮ್ಮನ ಕೊಲ್ಲಿಯ ನಿವಾಸಿ ನವೀನ್ ಅವರ ಪತ್ನಿ ಪ್ರಭಾ ಅವರು ಮೇ 6ರಂದು ಕೊರೊನಾ ಸೋಂಕಿಗೆ ಒಳಗಾಗಿ ಮೇ 16ರಂದು ಮಡಿಕೇರಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ವೇಳೆ ಪ್ರಭಾ ಅವರಿಗೆ ಸೇರಿದ್ದ ಮೊಬೈಲ್ ನಾಪತ್ತೆಯಾಗಿತ್ತು. ಅಮ್ಮನೊಂದಿಗೆ ಇದ್ದ ಹಲವಾರು ಫೋಟೋಗಳನ್ನು ಹೊಂದಿದ್ದ ಮೊಬೈಲ್ ಕಾಣೆಯಾಗಿದ್ದು ಅವರ ಪುತ್ರಿ ಹೃತಿಕ್ಷಾಳ ದುಃಖಕ್ಕೆ ಕಾರಣವಾಗಿತ್ತು.
ಕಾಣೆಯಾದ ಮೊಬೈಲ್ ಅನ್ನು ಹುಡುಕಿಕೊಡುವಂತೆ ಹೃತಿಕ್ಷಾ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, "ಮೊಬೈಲ್ನಲ್ಲಿ ತಾಯಿಯೊಂದಿಗಿನ ಒಡನಾಟದ ಚಿತ್ರಗಳು ಹಾಗೂ ವಿಡಿಯೋಗಳಿವೆ. ಮೊಬೈಲ್ ಅನ್ನು ಹುಡುಕಿಕೊಡಿ" ಎಂದು ಮನವಿ ಮಾಡಿದ್ದಳು.