ನವದೆಹಲಿ, ಆ.19 (DaijiworldNews/HR): ಸಪ್ಟೆಂಬರ್ ಹಾಗೂ ಡಿಸೆಂಬರ್ನಲ್ಲಿ ಮಕ್ಕಳಿಗಾಗಿ ಕೊರೊನಾ ಸೋಂಕಿನ ಲಸಿಕೆ ಬಳಕೆಗೆ ಬರಬಹುದು ಎಂದು ಐಸಿಎಂಆರ್ ನ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕಿ ಡಾ. ಪ್ರಿಯಾ ಅಬ್ರಾಹಮ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "2 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕೊರೊನಾ ಲಸಿಕೆಯ ಎರಡನೇ ಹಾಗೂ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಫಲಿತಾಂಶವನ್ನು ನಿರೀಕ್ಷಿಸಬಹುದು. ಸಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಮಕ್ಕಳಿಗೆ ನೀಡುವ ಲಸಿಕೆ ಬಳಕೆಗೆ ಬರಬಹುದು" ಎಂದಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಡೆಲ್ಟಾ ಸೋಂಕಿನಷ್ಟು ಹರಡುವಿಕೆಯ ಸಾಮರ್ಥ್ಯವನ್ನು ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ಸೋಂಕು ಹೊಂದಿಲ್ಲ. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಈ ಬಗ್ಗೆ ಸಂಶೋಧನಾ ಅಧ್ಯಯನವನ್ನು ಕೂಡ ನಡೆಸಿದ್ದು, ಲಸಿಕೆಗಳು ರೂಪಾಂತರಿ ಸೋಂಕಿನ ವಿರುದ್ಧ ಪರಿಣಾಮಕಾರಿತ್ವ ಗುಣಗಳನ್ನು ಹೊಂದಿವೆ" ಎಂದು ಹೇಳಿದ್ದಾರೆ.