ಕಲಬುರ್ಗಿ, ಆ.19 (DaijiworldNews/HR): ಬಿಜೆಪಿಯು ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ತರಲು ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಬಿಜೆಪಿಯಿಂದ ತಾಲಿಬಾನ್, ಗೂಂಡಾ ಸಂಸ್ಕೃತಿ ಮೆರೆಯಲಾಗುತ್ತಿದೆ. ಕೇಂದ್ರ ಸಚಿವರ ಸ್ವಾಗತಕ್ಕಾಗಿ ಪೊಲೀಸರಿಂದ ಗಾಳಿಯಲ್ಲಿ ಗುಂಡು ಹೊಡೆಸಲಾಗಿದ್ದು, ಈಗ ಮೇಲಧಿಕಾರಿಗಳು, ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳದೇ ಮೂವರು ಪಿಸಿಗಳನ್ನು ಅಮಾನತು ಮಾಡಿ ಅಮಾಯಕರಿಗೆ ಶಿಕ್ಷೆ ನೀಡಲಾಗಿದೆ" ಎಂದರು.
ಇನ್ನು "ಕೊರೊನಾ ಸೋಂಕಿನಿಂದಾಗಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಸಂಭ್ರಮಾಚರಣೆ ನಡೆಸಿ, ಮಜಾ ಮಾಡುತ್ತಿದ್ದಾರೆ ಸಂಕಷ್ಟದ ನಡುವೆ ಸಂಭ್ರಮಾಚರಣೆ ವಿಕೃತಿ. ರಾಜ್ಯದ ಸಂಸ್ಕೃತಿಗೆ ಕಪ್ಪು ಚುಕ್ಕೆ ಬಳಿಯುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಸಮಾವೇಶಗಳನ್ನು ನಡೆಸಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.