ಬೆಂಗಳೂರು, ಆ.19 (DaijiworldNews/HR): ರಸ್ತೆ ತೆರಿಗೆಯು ಸೆಪ್ಟೆಂಬರ್ 15ರಂದು ಪಾವತಿಸಬೇಕಿದ್ದನ್ನು ಅಕ್ಟೊಬರ್ 15 ರವರೆಗೆ ದಂಡರಹಿತವಾಗಿ ಪಾವತಿಸಲು ಗಡುವು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, "ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳ ಸದಸ್ಯರು ನನ್ನನ್ನು ಭೇಟಿ ಮಾಡಿ ಕೊರೊನಾ ಹಿನ್ನಲೆಯಲ್ಲಿ ಉದ್ದಿಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ" ಎಂದರು.
ಇನ್ನು ಆಗಸ್ಟ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಸೆಪ್ಟೆಂಬರ್ 15ರವರೆಗೆ ಹಾಗೂ ಸೆಪ್ಟೆಂಬರ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಅಕ್ಟೊಬರ್ 15ರವರೆಗೆ ದಂಡರಹಿತವಾಗಿ ಪಾವತಿಸಲು ವಿಸ್ತರಿಸಲಾಗಿದೆ. ಇದರಿಂದ ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.