ಯಾದಗಿರಿ, ಆ 19 (DaijiworldNews/MS): ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನ ಸ್ವಾಗತ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದ ಮೇಲೆ ಯಾದಗಿರಿ ಗ್ರಾಮಾಂತರ ಪಿಎಸ್ ಐ ಹಾಗೂ ಮೂವರು ಕಾನ್ಸ್ ಟೇಬಲ್ ಗಳನ್ನ ಸಸ್ಪೆಂಡ್ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅಮಾನತು ಆದೇಶ ಹೊರಡಿಸಿದ್ದು ಯಾದಗಿರಿ ಪಿಎಸ್ ಐ ಸುರೇಶ್ ಸೇರಿ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವೀರೇಶ್, ಸಂತೋಷ ಮತ್ತು ಮೆಹಬೂಬ್ ಅಮಾನತುಗೊಂಡವರು.
ಆ. ೧೮ ರಂದು ಯಾದಗಿರಿ ತಾಲೂಕಿನ ಯರಗೋಳಗ್ರಾಮದ ಬಳಿ ಬಿಜೆಪಿ ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಲಾಗಿತ್ತು. ಗಾಳಿಯಲ್ಲಿ ಗುಂಡು ಹಾರಿಸಲು ನಾಡ ಬಂದೂಕು ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
'ಜನಾಶೀರ್ವಾದ ಯಾತ್ರೆಯಲ್ಲಿ ಹೆಚ್ಚು ಜನ ಸೇರದಂತೆ ಬಂದೊಬಸ್ತ್ಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಅಲ್ಲಿದ್ದ ಪೊಲೀಸರು ಮದ್ದು ಹಾರಿಸುವುದನ್ನು ತಡೆದಿಲ್ಲ. ಬಂದೂಕುಗಳನ್ನು ವಶಪಡಿಸಿಕೊಂಡಿಲ್ಲ. ಕರ್ತವ್ಯ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ' ಎಸ್ಪಿ ತಿಳಿಸಿದ್ದಾರೆ. ಇದರೊಂದಿಗೆ ಬೈಕ್ ರ್ಯಾಲಿಗೂ ಅನುಮತಿ ನೀಡಿರಲಿಲ್ಲ. ಕಾರ್ಯಕ್ರಮ ಸಂಘಟಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು' ಎಂದು ಸಿ.ಬಿ.ವೇದಮೂರ್ತಿ ತಿಳಿಸಿದರು.