ಬೆಂಗಳೂರು, ಆ 19 (DaijiworldNews/MS): ಅತ್ತ ಮಗ ಆತ್ಮಹತ್ಯೆಗೆ ಶರಣಾದರೆ ಇತ್ತಮಗನ ಅಗಲುವಿಕೆಯ ಅಘಾತಕ್ಕೊಳಗಾದ ತಾಯಿ ರಸ್ತೆಗೆ ನುಗ್ಗಿ ಕಾರಿಗೆ ಅಡ್ಡಲಾಗಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಮನಕಲಕುವ ಘಟನೆ ವಿಜಯನಗರದಲ್ಲಿ ನಡೆದಿದೆ.
ಮಾರೇನಹಳ್ಳಿ ಸಮೀಪದ ಎಂ.ಸಿ.ಲೇಔಟ್ನ ಮೋಹನ್ ಗೌಡ (20) ಹಾಗೂ ಆತನ ತಾಯಿ ಲೀಲಾವತಿ (45) ಮೃತಪಟ್ಟವರು. ಹಲವು ವರ್ಷಗಳಿಂದ ಮಾರೇನಹಳ್ಳಿಯಲ್ಲಿ ತಮ್ಮ ಇಬ್ಬರು ಮಕ್ಕಳ ಜತೆ ಲೋಕೇಶ್ ಹಾಗೂ ಲೀಲಾವತಿ ದಂಪತಿ ನೆಲೆಸಿದ್ದು ಈ ಪೈಕಿ ಮಗ ಮೋಹನ್ ಗೌಡ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿಕಾಂನಲ್ಲಿ ಓದುತ್ತಿದ್ದ.
ಮೋಹನ್ ಗೌಡ ತನ್ನ ಸ್ನೇಹಿತರ ಜೊತೆ ಬೈಕ್ ವಿಚಾರವಾಗಿ ಜಗಳವಾಡಿದ್ದ ಎನ್ನಲಾಗಿದೆ. ಈ ವಿಚಾರ ತಿಳಿದು ಆತನಿಗೆ ಪೋಷಕರು ಬುದ್ಧಿವಾದ ಹೇಳಿದ್ದರು. ಇದರಿಂದ ಬೇಸರಗೊಂಡ ಮೋಹನ್, ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸಿದ ಪೋಷಕರು, ವಿಜಯನಗರದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ.
ಆದರೆ ಆಸ್ಪತ್ರೆಯಲ್ಲಿ ಮಗನ ಸಾವಿನ ಸುದ್ದಿ ತಿಳಿದ ತಾಯಿ ಲೀಲಾವತಿ ಆಸ್ಪತ್ರೆಯಿಂದ ಹೊರಗೋಡಿ ಬಂದಿದ್ದಾರೆ. ಆ ಬಳಿಕ ಸಂಬಂಧಿಕರೊಂದಿಗೆ ಆಸ್ಪತ್ರೆಯ ಮುಂಭಾಗ ನಿಂತಿದ್ದು ಮಗನ ಇಲ್ಲವಾದ ಮೇಲೆ ನಾನು ಬದುಕಿ ಪ್ರಯೋಜನವಿಲ್ಲ ಎನ್ನುತ್ತಾ ಆಕ್ರಂದಿಸುತ್ತಿದ್ದರು. ಈ ನಡುವೆ ಏಕಾಏಕಿ ಕಣ್ಣೀರು ಸುರಿಸುತ್ತ ದಿಢೀರಾಗಿ ರಸ್ತೆಗೆ ನುಗ್ಗಿ ಕಾರಿಗೆ ಸಿಲುಕಿದ್ದಾರೆ. ರಸ್ತೆಗೆ ದಿಢೀರ್ ಬಂದ ಲೀಲಾವತಿ ಅವರನ್ನು ರಕ್ಷಿಸಲು ಚಾಲಕ ಯತ್ನಿಸಿದರೂ ಸಾಧ್ಯವಾಗಿಲ್ಲ. ಅಪಘಾತದ ರಭಸಕ್ಕೆ ತೀವ್ರ ರಕ್ತಸ್ತ್ರಾವವಾಗಿ ಲೀಲಾವತಿಯೂ ಮೃತಪಟ್ಟಿದ್ದಾರೆ.
ಈ ಮೊದಲು ಅಪಘಾತ ಎಂದು ಹೇಳಲಾಗಿದ್ದರೂ ಸಿಸಿಟಿವಿ ಪರಿಶೀಲನೆ ಬಳಿಕ ಆತ್ಮಹತ್ಯೆ ಎಂದು ತಿಳಿದುಬಂದಿದೆ.