ದಾಂಡೇಲಿ, ಆ.19 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಾಪಸ್ಸಿಗೆ ಒತ್ತಾಯಿಸಿ ದೆಹಲಿಯಲ್ಲಿ ಕಳೆದ ಲಕ್ಷಾಂತರ ರೈತರು, ಕಾರ್ಮಿಕರು ಹೋರಾಟ ನಡೆಸುತ್ತಿರುವುದು ದಲ್ಲಾಳಿಗಳ ಹೋರಾಟವಾಗಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು, ಕೂಡಲೇ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಬೇಕು ಎಂದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನಾಶೀರ್ವಾದ ಯಾತ್ರೆಯನ್ನು ಮಂತ್ರಿಗಳು ಜಾತ್ರೆ ಮಾಡುತ್ತಿದ್ದಾರೆ. ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಚಳವಳಿ ನಡೆಸುತ್ತಿರುವ ರೈತರನ್ನು ದಲ್ಲಾಳಿಗಳೆಂದು ಅವಮಾನಿಸಿರುವುದಕ್ಕೆ ದೇಶದ ಜನತೆಯ ಮತ್ತು ಅನ್ನದಾತರ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದರು.
ಇನ್ನು ಲೂಟಿಕೋರರ ಕಾರ್ಪೋರೇಟ್ ಕಂಪನಿಗಳ ಪರಿವಾರಕ್ಕೆ ರೈತ ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿರೋಧಿಸಿ ದೇಶಾದ್ಯಂತ ಕಳೆದ ನವೆಂಬರ್ದಿಂದ ನಿರಂತರ ಹೋರಾಟದಲ್ಲಿ ತೊಡಗಿರುವ ಲಕ್ಷಾಂತರ ರೈತ ಕುಟುಂಬಗಳನ್ನು ಅವರು ರೈತರಲ್ಲ, ಬ್ರೋಕರುಗಳೆಂದು ಉದ್ದಟತನದ ಮಾತನಾಡಿ ಅಪಮಾನಿಸಿದ್ದಾರೆ" ಎಂದು ಹೇಳಿದ್ದಾರೆ.