ಬೆಂಗಳೂರು, ಆ. 18 (DaijiworldNews/SM): ಅಫ್ಘಾನಿಸ್ತಾನದಲ್ಲಿ ಸಂಘರ್ಷಭರಿತ ಪರಿಸ್ಥಿತಿ ಇದ್ದು, ಅಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಲು ರಾಜ್ಯ ಸರಕಾರ ಮುಂದಾಗಿದೆ. ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದುಕೊಂದು ಕನ್ನಡಿಗರನ್ನು ಕರೆ ತರುವ ಕಾರ್ಯ ನಡೆಯಲಿದೆ.
ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಮಾಡಲು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಉಮೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆ ಮೂಲಕ ಅಫ್ಘಾನಿಸ್ತಾನದಲ್ಲಿ ಆತಂಕದಲ್ಲಿರುವ ಕನ್ನಡಿಗರಿಗೆ ನೆರವಾಗಲು ಸರಕಾರ ಮುಂದಾದಂತಾಗಿದೆ. ಇನ್ನೊಂದೆಡೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂದು ಸರಕಾರವನ್ನು ಮಾಜಿ ಸಚಿವ ಯು.ಟಿ. ಖಾದರ್ ಒತ್ತಾಯಿಸಿದ್ದರು. ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಕೂಡ ಬರೆದಿದ್ದರು. ಇದರ ಬೆನ್ನಲ್ಲೇ ನೋಡಲ್ ಅಧಿಕಾರಿಯ ನೇಮಕವಾಗಿದೆ.