ಮೈಸೂರು, ಆ 18 (DaijiworldNews/PY): "ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ ಸಂದರ್ಭ ಹೆಚ್ಚಿನ ಮಂದಿ ಬೊಬ್ಬೆ ಹಾಕುತ್ತಿದ್ದರು. ಪ್ರಧಾನಿ ಮೋದಿ ಅವರು ಈ ಕಾಯ್ದೆಯನ್ನು ಏಕೆ ಜಾರಿ ಮಾಡಿದರು ಎನ್ನುವುದು ಅಫ್ಗಾನಿಸ್ತಾನದ ಪರಿಸ್ಥಿತಿ ಹಿನ್ನೆಲೆ ತಿಳಿದಿರಬಹುದು" ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
"ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಯಿತು. ಅಫ್ಗಾನಿಸ್ತಾನದಲ್ಲಿರುವ ಮುಸ್ಲಿಮರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ರಾಷ್ಟ್ರಗಳಾದ ಉಜ್ಜೇಕಿಸ್ತಾನ, ಪಾಕಿಸ್ತಾನ ಹಾಗೂ ಇರಾನ್ ಅವರಿಗೆ ಆಶ್ರಯ ನೀಡಲಿ" ಎಂದಿದ್ದಾರೆ.
"ಷರಿಯಾ, ತಾಲಿಬಾನ್ ಮನಸ್ಥಿತಿ ಎಷ್ಟು ಮಾನವ ವಿರೋಧಿ ಎನ್ನುವುದಕ್ಕೆ ಈಗಿನ ಘಟನೆಯೇ ಸಾಕ್ಷಿಯಾಗಿದೆ. ಇದು ಕೇವಲ ಅಫ್ಗಾನಿಸ್ತಾನದ ಸಮಸ್ಯೆ ಅಲ್ಲ. ನಮ್ಮ ದೇಶದೊಳಗೂ ಈ ಮನಸ್ಥಿತಿ ಇದ್ದು, ಇದನ್ನು ಹಾಗೆಯೇ ಬೆಳೆಯಲು ಬಿಟ್ಟಲ್ಲಿ, ಪರಿಸ್ಥಿತಿ ಅವನತಿಯತ್ತ ಸಾಗುತ್ತದೆ" ಎಂದು ಹೇಳಿದ್ದಾರೆ.
"ಮುಸ್ಲಿಂ ದೇಶಗಳಿಗೆ ಪ್ರಜಾಪ್ರಭುತ್ವ ಎಂದರೆ ಆಗುವುದಿಲ್ಲ. ಟರ್ಕಿಯನ್ನು ಹೊರತುಪಡಿಸಿ ಉಳಿದ ದೇಶಗಳಲ್ಲಿ ದೊಡ್ಡ ಸಮಸ್ಯೆ ಇದೆ. ನಾವು ನಂಬಿದ್ದು ಸರಿ, ಉಳಿದದ್ದು ಸುಳ್ಳು ಎಂದು ಹೇಳುವವರು ಎಂದಿಗೂ ಉದ್ಧಾರ ಆಗುವುದಿಲ್ಲ. ನಾಗರಿಕತೆ ಉಳಿಯುವುದಿಲ್ಲ" ಎಂದಿದ್ದಾರೆ.
"ಇಡೀ ಜಗತ್ತನ್ನೇ ತಾಲಿಬಾನಿಗಳು ಇಸ್ಲಾಮೀಕರಣ ಮಾಡುವ ಧ್ಯೇಯ ಹೊಂದಿದ್ದಾರೆ. ಭಾರತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯ" ಎಂದು ಎಚ್ಚರಿಕೆ ನೀಡಿದ್ದಾರೆ.