ಬೆಂಗಳೂರು, ಆ18 (DaijiworldNews/MS): ತಾಲಿಬಾನ್ ಕೈವಶವಾದ ಬಳಿಕ ಯುದ್ದಪೀಡಿತ ದೇಶವಾಗಿ ಬದಲಾದ ಅಫ್ಘಾನಿಸ್ತಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವರು ಮಂದಿ ಸಿಲುಕಿಕೊಂಡಿದ್ದು ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರಾವಳಿ ಜಿಲ್ಲೆಯ ಬಹಳಷ್ಟು ಮಂದಿ ಅಫ್ಘಾನಿಸ್ತಾನದನಲ್ಲಿ ಸಿಲುಕಿಕೊಂಡಿದ್ದು, ಈ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದೇನೆ. ಸದ್ಯ ಅವರೆಲ್ಲರೂ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಇದಕ್ಕಾಗಿ ಸರ್ಕಾರ ತಕ್ಷಣ ಓರ್ವ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಕನ್ನಡಿಗರನ್ನು ಕೇಂದ್ರದ ಸಚಿವರ ಹಾಗೂ ಕೇಂದ್ರ ಸರ್ಕಾರದ ಸಹಾಯದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ನಾನು ಈ ವಿಚಾವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರನ್ನು ಇಂದು ಭೇಟಿಯಾಗಿ, ಮನವಿ ಮಾಡಿದ್ದೇನೆ ಎಂದರು.