ಯಾದಗಿರಿ, ಆ 18 (DaijiworldNews/PY): ಜನಾಶೀರ್ವಾದ ಕಾರ್ಯಕ್ರಮಕ್ಕೆ ಯಾದಗಿರಿಗೆ ಆಗಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಅವರ ಸ್ವಾಗತಕ್ಕೆ ಗಾಳಿಯಲ್ಲಿ ಗುಂಡುಹಾರಿಸಿ ಸ್ವಾಗತಿಸಲಾಯಿತು.
ಯಾದಗಿರಿ ತಾಲೂಕಿನ ಯರಹೋಳ ಗ್ರಾಮದ ಬಳಿ ಫೈರಿಂಗ್ ಮಾಡಲಾಗಿದ್ದು, ಘಟನೆಯ ಬಗ್ಗೆ ಯಾದಗಿರಿ ಎಸ್ಪಿ ವೇದಮೂರ್ತಿ ಅವರು ಎಫ್ಐಆರ್ ದಾಖಲಿಸಲು ಸೂಚಿಸಿದ್ದಾರೆ. ಗಾಳಿಯಲ್ಲಿ ಗುಂಡುಹಾರಿಸಿರುವ ಕಾರಣ ಎಫ್ಐಆರ್ ದಾಖಲಾಗಿದ್ದು, ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯರಹೋಳ ಗ್ರಾಮದಲ್ಲಿ ಜನ ಕೇಂದ್ರ ಸಚಿವ ಭಗವಂತ ಖೂಬಾ ಅವರು ಆಗಮಿಸುತ್ತಿದ್ದಂತೆ ನಾಡಬಂದೂಕು ಕೈಯಲ್ಲಿ ಹಿಡಿದು, ಪುಷ್ಪ ಅರ್ಪಿಸಿ ಸ್ವಾಗತ ಕೋರಿದ್ದಾರೆ.
ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಬಾಬುರಾವ್ ಚಿಂಚನಸೂರು ಗೈರಾಗಿದ್ದಾರೆ. ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಕಲಬುರ್ಗಿಗೆ ವಾಪಾಸ್ಸಾಗಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಅವರ ಸ್ವಾಗತದ ಸಂದರ್ಭ ಬಿಜೆಪಿ ಕಾರ್ಯಕರ್ತರೇ ಗುಂಡು ಹಾರಿಸಿದ್ದರು.
ಸ್ವಾಗತದ ವೇಳೆ ಗಾಳಿಯಲ್ಲಿ ಗುಂಡುಹಾರಿಸುವ ವ್ಯವಸ್ಥೆಯನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾಡಿದ್ದಾರೆ ಎನ್ನಲಾಗಿದೆ. ಗಾಳಿಯಲ್ಲಿ ಗುಂಡುಹಾರಿಸಲು ಚಿಂಚನಸೂರು ಅವರೇ ಹೇಳಿದ್ದರು ಎಂದು ತಿಳಿದುಬಂದಿದೆ.
ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಮಾಡಲಾಗಿದೆ. ಜಿಲ್ಲಾಡಳಿತವು ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಆದರೆ, ಕೊರೊನಾ ನಿಯಮ ಉಲ್ಲಂಘಿಸಿ ಯಾದಗಿರಿಯಲ್ಲಿ ಖೂಬಾ ನೇತೃತ್ವದಲ್ಲಿ ಯಾತ್ರೆ ನಡೆಯುತ್ತಿದೆ.