ಚಿತ್ರದುರ್ಗ, ಆ 18 (DaijiworldNews/MS): ಆಗಸ್ಟ್ 23 ರಿಂದ 9, 10 ಹಾಗೂ ಪಿಯು ತರಗತಿ ಆರಂಭಿಸಲಾಗುತ್ತಿದ್ದು, ಇದರ ಫಲಿತಾಂಶ ನೋಡಿಕೊಂಡು ಮುಂದೆ 1 ರಿಂದ 8 ನೇ ತರಗತಿ ಶುರು ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಕಾರ್ಯಪಡೆ, ಮಕ್ಕಳ ತಜ್ಞರು ಹಾಗೂ ತಾಂತ್ರಿಕ ಸಮಿತಿ ವರದಿ ಆಧರಿಸಿ 9, 10 ಹಾಗೂ ಪಿಯು ತರಗತಿ ಪ್ರಾರಂಭವಾಗಲಿದೆ.ಭಯಬಿಟ್ಟು ಶಾಲೆಗೆ ಬರಲು ಮಕ್ಕಳ ಮನವೊಲಿಸಲು ಶಿಕ್ಷಕರಿಗೆ ಸೂಚನೆ ನೀಡಿದ್ದೇವೆ. ಹಾಗೆಂದು ಯಾವುದೇ ಕಾರಣಕ್ಕೂ ಬಲವಂತ ಮಾಡುವುದಿಲ್ಲ. ಪೋಷಕರು ಒಪ್ಪದಿದ್ದರೆ ಆನ್ ಲೈನ್ ತರಗತಿ ಮುಂದುವರಿಸಲಾಗುವುದು. ಈ ಬಗ್ಗೆ ಆತಂಕ ಬೇಡ' ಎಂದು ಹೇಳಿದರು. ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಒಂದು ವೇಳೆ ಸೋಂಕು ತಗುಲಿದರೆ ಒಂದು ವಾರ ಶಾಲೆ ಸ್ಥಗಿತಗೊಳಿಸಲಾಗುವುದು ಬಳಿಕ ಸಂಪೂರ್ಣ ಸ್ಯಾನಿಟೈಸ್ ಮಾಡಿ ಮತ್ತೆ ಶಾಲೆ ತೆರೆಯಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ಕಲಿಕೆಯ ವಾತವಾರಣ ಕಲ್ಪಿಸಲು ಕಳೆದ ಒಂದುವರೆ ವರ್ಷದಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅನ್ ಲೈನ್ ಹಾಗೂ ಇತರ ಮಾಧ್ಯಮದ ಮೂಲಕ ತರಗತಿ ನಡೆಸಲಾಗುತ್ತಿದ್ದು ಆದರೂ ಕೂಡಾ ಶೇ.30 ರಿಂದ 40 ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಹೀಗಾಗಿ ಶಾಲಾರಂಭದ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಹೇಳಿದರು.