ಲಕ್ನೋ, ಆ 18 (DaijiworldNews/PY): ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಡಿಸಿಕೊಂಡಿರುವುದನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದ ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ್ ವಿರುದ್ದ ಪ್ರಕರಣ ದಾಖಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು, "ಶಫಿಕುರ್ ಹಾಗೂ ಇತರ ಇಬ್ಬರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಖಚಿತಪಡಿಸಿದ್ದು, ತಾಲಿಬಾನ್ ಅನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಕಾರಣ ಸಂಸದರ ವಿರುದ್ದ ದೂರು ಸ್ವೀಕರಿಸಿದ್ದೇವೆ" ಎಂದಿದ್ದಾರೆ.
"ಫೇಸ್ಬುಕ್ ವಿಡಿಯೋದಲ್ಲಿ ಇತರ ಇಬ್ಬರು ವ್ಯಕ್ತಿಗಳಾದ ಫೈಜಾನ್ ಚೌಧರಿ ಹಾಗೂ ಮೊಹಮ್ಮದ್ ಮುಕೀಮ್ ಎಂಬವರು ಈ ರೀತಿಯಾದ ಹೇಳಿಕೆ ನೀಡಿದ್ದರು. ಹಾಗಾಗಿ ಅವರ ವಿರುದ್ದ ಕೂಡಾ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ರಾಜೇಶ್ ಸಿಂಘಾಲ್ ಅವರು ಸಂಸದ ಹಾಗೂ ಇತರೆ ಇಬ್ಬರ ವಿರುದ್ದ ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಫ್ಗಾನಿಸ್ತಾನದ ಬೆಳವಣಿಗೆ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶಫಿಕುರ್, "ಭಾರತವು ಬ್ರಿಟೀಷ್ ಆಡಳಿತಕ್ಕೆ ಒಳಪಟ್ಟಿದ್ದ ಸಂದರ್ಭ ಸ್ವಾತಂತ್ರ್ಯಕ್ಕಾಗಿ ಇಡೀ ರಾಷ್ಟ್ರವೇ ಹೋರಾಟ ಮಾಡಿತ್ತು. ಸ್ವತಂತ್ರರಾಗಲು ಅವರೂ ಕೂಡಾ ಬಯಸಿದ್ದಾರೆ. ಇದು ಅವರ ಖಾಸಗಿ ವಿಚಾರ. ನಾವು ಹೇಗೆ ಇದರಲ್ಲಿ ಮೂಗು ತೂರಿಸಲು ಸಾಧ್ಯ?" ಎಂದು ಕೇಳಿದ್ದರು.