ನವದೆಹಲಿ, ಆ 18 (DaijiworldNews/PY): "ಸೆ.5ರಂದು ನಡೆಯಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಪರೀಕ್ಷೆ ಬರೆಯಲು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು" ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
"ಭಾರತದ ರಕ್ಷಣಾ ಪಡೆಗಳಿಗೆ ಸೇರಲು ವಿಶೇಷ ತರಬೇತಿ ಒದಗಿಸುವ ಎನ್ಡಿಎ ದಾಖಲಾತಿಯು, ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನ್ಯಾಯಾಲಯದ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರಲಿದೆ" ಎಂದಿದೆ.
ಪುರುಷರಿಗೆ ಮಾತ್ರ ಎನ್ಡಿಎ ಸೇರಲು ಅವಕಾಶವಿದೆ. ಈ ನಿಯಮವನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಪ್ರಶ್ನಿಸಲಾಗಿದ್ದು, ಎನ್ಡಿಎ ಸೇರಲು ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಕೋರಲಾಗಿದೆ. ಲಿಂಗದ ಆಧಾರದ ಮೇಲೆ ಅರ್ಹ ಹಾಗೂ ಆಸಕ್ತ ಯುವತಿಯರನ್ನು ಪ್ರತಿಷ್ಠಿತ ಎನ್ಡಿಎ ಸೇರಲು ಅವಕಾಶ ನೀಡದೇ ಇರುವುದು ಭಾರತೀಯ ಸಂವಿಧಾನದ ಸಮಾನತೆಯ ಮೂಲ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ವಾದಿಸಲಾಗಿದೆ.
ಸೇನೆಯ ಪರ ವಕೀಲರು, ಅರ್ಜಿಯಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಕೇಳಿದ್ದ ಕೋರ್ಟ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇವಲ ಯುವಕರಿಗೆ ಪ್ರವೇಶ ತೆರೆದಿರುವುದು ಪಾಲಿಸಿಡಿಸಿಷನ್ ಆಗಿದೆ ಎಂದಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ತೀರ್ಮಾನ ಲಿಂಗತಾರತಮ್ಯದಿಂದ ಕೂಡಿದೆ" ಎಂದಿದೆ.
"ಈ ರೀತಿಯಾದ ಮನೋಭಾವ ಬದಲಾಗುವುದು ಮುಖ್ಯ. ಈ ಸಲುವಾಗಿ ಸೇನೆ ತಾನಾಗಿಯೇ ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್ ಆದೇಶ ಹೊರಡಿಸುವ ಮೊದಲು ಸನ್ನಿವೇಶ ತರಬೇಡಿ" ಎಂದು ನ್ಯಾ. ಎಸ್. ಕೆ ಕೌಲ್ ಹಾಗೂ ನ್ಯಾ. ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಸೆಪ್ಟೆಂಬರ್ 5ಕ್ಕೆ ನಿಗದಿಯಾಗಿರುವ ಎನ್ಡಿಎ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಭಾರತೀಯ ಸೇನೆಗೆ ಸೂಚನೆ ನೀಡಿದೆ.