ಚಿಕ್ಕಮಗಳೂರು, ಆ 18 (DaijiworldNews/PY): "ಬಿಜೆಪಿ ಸರ್ಕಾರ ಬೀಳುತ್ತದೆ ಎನ್ನುವ ವಿಚಾರದಲ್ಲಿ ಯಾರು ಕನಸು ಕಂಡರು ಸಹ ಅದು ನನಸಾಗಲಾರದು. ಬಿಜೆಪಿ ಸರ್ಕಾರ ಸುಭದ್ರ ಹಾಗೂ ಸುಸ್ಥಿರವಾಗಿದೆ" ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರತಿಯೋರ್ವರಿಗೂ ಕನಸು ಕಾಣುವ ಹಕ್ಕು ಇದೆ. ಕನಸು ಕಾಣುವುದು ತಪ್ಪಲ್ಲ. ಆದರೆ, ಬಿಜೆಪಿ ಸರ್ಕಾರದ ಬೀಳುತ್ತದೆ ಎಂದು ಕನಸು ಕಂಡರೂ ಕೂಡಾ ಅದು ನನಸಾಗುವುದಿಲ್ಲ. ಬಿಜೆಪಿ ಸರ್ಕಾರ ಸುಭದ್ರವಾಗಿದೆ" ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ದತ್ತ ಪೀಠ ಅರ್ಚಕರ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ದತ್ತಪೀಠ ಬಗ್ಗೆ ವಾದ-ವಿವಾದ ಮುಗಿದು ಅಂತಿಮ ತೀರ್ಪು ಮಾತ್ರವೇ ಬಾಕಿ ಇದೆ. ಕೋರ್ಟ್ ತೀರ್ಪಿನ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ" ಎಂದಿದ್ದಾರೆ.