ಬೆಂಗಳೂರು, ಆ 18 (DaijiworldNews/PY): "ರಾಜ್ಯಾದ್ಯಂತ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದು, ಈ ವೇಳೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಈಗಾಗಲೇ ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಹಾಗಾಗಿ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ರಾಜ್ಯಾದ್ಯಂತ ಪ್ರಮುಖ ಶಿಕ್ಷ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಯೋಗಿಕವಾಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಸಲಹೆ ನೀಡಲಾಯಿತು.
ಈ ನೀತಿಯ ಜಾರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಆಯೋಗ ಹಾಗೂ ಇತರ ಸಾಂಸ್ಥಿತ ವ್ಯವಸ್ಥೆಯನ್ನು ಕೂಡಾ ಸ್ಥಾಪಿಸುವ ಬಗ್ಗೆ ರೂಪುರೇಷೆಗಳನ್ನು ತಯಾರಿಸುವಂತೆ ಸೂಚನೆ ನೀಡಲಾಯಿತು. ಇದಕ್ಕೆ ಖಾಸಗಿಯವರ ಸಹಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು. ರಾಜ್ಯದ ಜಿಇಆರ್ ಸದ್ಯ ಶೇ. 32 ರಷ್ಟು ಇದ್ದು, ಮುಂದಿನ ದಿನಗಳಲ್ಲಿ ಇದನ್ನು ಶೇ.50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರಕವಾಗಿ ಬಿಎಡ್, ಡಿಎಡ್ ಪಠ್ಯ ವಿಷಯವನ್ನು ಇನ್ನುಷ್ಟು ಪರಿಣಾಮಕಾರಿಯಾಗುವಂತೆ ಪರಿಷ್ಕರಿಸಲು ಸಿಎಂ ಸೂಚನೆ ನೀಡಿದ್ದಾರೆ.
ಜಿಲ್ಲೆಗೊಂದು ತಾಂತ್ರಿ ಶಿಕ್ಷಣ ಶಾಲೆಯನ್ನು ಆರಂಭಿಸುವಂತೆ ಸಿಎಂ ಸಲಹೆ ನೀಡಿದ್ದು, "ಇದು ಯುವಕರಿಗೆ ಉದ್ಯೋಗ ಪಡೆದುಕೊಳ್ಳಲು ಅನುವಾಗಲಿದೆ" ಎಂದಿದ್ದಾರೆ.