ನವದೆಹಲಿ, ಆ 18 (DaijiworldNews/PY): ಭಾರತಕ್ಕೆ ಬರಲು ಬಯಸುವ ಅಫ್ಗಾನಿಸ್ತಾನದ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.
ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಭದ್ರತೆ ಮೇಲಿನ ಸಂಪುಟ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸೂಚನೆ ನೀಡಿದರು.
"ಅಫ್ಗಾನಿಸ್ತಾನದಲ್ಲಿ ಸಿಲುಕಿದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಎಲ್ಲಾ ರೀತಿಯಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸೂಚನೆ ನೀಡಿದ್ದಾರೆ.
"ಭಾರತಕ್ಕೆ ಬರಲು ಬಯಸುವ ಸಿಖ್ ಹಾಗೂ ಹಿಂದೂಗಳಿಗೆ ನಾವು ಆಶ್ರಯ ನೀಡಬೇಕು ಹಾಗೂ ನಾವು ಸಾಧ್ಯವಿರುವ ಎಲ್ಲಾ ಸಹಾಯವನ್ನು ಕೂಡಾ ಒದಗಿಸಬೇಕು. ಸಹಾಯಕ್ಕಾಗಿ ಭಾರತದತ್ತ ನೋಡುತ್ತಿರುವ ಆ ದೇಶದ ಸಹೋದರ, ಸಹೋದರಿಯರಿಗೆ ಎಲ್ಲಾ ರೀತಿಯ ನೆರವು ನೀಡಬೇಕು" ಎಂದಿದ್ದಾರೆ.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಹರ್ಷವರ್ಧನ್ ಶೃಂಗ್ಲಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ಅಫ್ಗಾನಿಸ್ತಾನದಲ್ಲಿನ ಭಾರತ ರಾಯಭಾರಿ ರುದೇಂದ್ರ ಟಂಡನ್ ಭಾಗವಹಿಸಿದ್ದರು.