ನವದೆಹಲಿ, ಆ 17 (DaijiworldNews/MS): ತಾಲಿಬಾನ್ ವಶದಿಂದ ಹದಗೆಟ್ಟ ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಸಹಾಯವಾಣಿ ತೆರೆಯಲಾಗಿದೆ. ಈ ಕುರಿತಂತೆ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಟ್ವಿಟ್ ಮಾಡಿದ್ದು, ಆಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ನೆರವಿಗಾಗಿ ಸಹಾಯವಾಣಿ ಮತ್ತು ಇ-ಮೇಲ್ ಐಡಿ ತೆರೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಫ್ಘಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 919717785379 ಸಹಾಯವಾಣಿ ತೆರೆಯಲಾಗಿದೆ. ಇದಲ್ಲದೆ MEAHelpdeskIndia@gmail.com ಇಮೇಲ್ ಹೆಲ್ಪ್ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಇಚ್ಚಿಸುವ ಭಾರತೀಯರುಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಆಫ್ಘಾನ್ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಬೂಲ್ ನಲ್ಲಿದ್ದ ಭಾರತೀಯ ರಾಯಭಾರಿ ಸೇರಿದಂತೆ ಅಧಿಕಾರಿಗಳನ್ನು ಕೂಡಲೇ ವಿಶೇಷ ವಿಮಾನದ ಮೂಲಕ ವಾಪಾಸ್ ಕರೆತರಲಾಗಿದೆ.
ಇದಕ್ಕೂ ಮೊದಲು ಇದೇ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ವಿದೇಶಾಂಗ ಇಲಾಖೆ, ಅಫ್ಗಾನಿಸ್ತಾನದ ಪರಿಸ್ಥಿತಿಯನ್ನು ಭಾರತವು ನಿರಂತರವಾಗಿ ಗಮನಿಸುತ್ತಿದೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿತ್ತು.