ಮೈಸೂರು, ಆ 17 (DaijiworldNews/MS): ನೈಜವಾದ ರೈತರನ್ನು ಮನವೊಲಿಸಬಹುದು ಆದರೆ ರೈತರ ಮುಖವಾಡ ಹಾಕಿಕೊಂಡ ರೈತರಂತೆ ನಟಿಸುವವರ ಮನವೊಲಿಸುವು ಅಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದೊಂದಿದೆ ಮಾತನಾಡಿದ ಅವರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಅಲ್ಲಿ ನಡೆಯುತ್ತಿರುವುದು ರೈತರ ಹೋರಾಟ ಅಲ್ಲ ಅದು ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಹೋರಾಟವಾಗಿದೆ. ಇಲ್ಲಿವರೆಗೆ 11 ಸುತ್ತಿನ ಮಾತುಕತೆ ನಡೆದಿದ್ದು, ಯಾವುದೇ ವಿಚಾರ ಒಪ್ಪಿಕೊಳ್ಳದ ಮನಸ್ಥಿತಿ ರೈತ ಮುಖಂಡರದ್ದು. ಪಂಜಾಬ್ನಲ್ಲಿ ಎಪಿಎಂಸಿಯ ದೊಡ್ಡ ಲಾಬಿ ನಡೆಯುತ್ತಿದೆ. ರೈತರನ್ನು ವಂಚಿಸುತ್ತಿರುವ ಮಧ್ಯವರ್ತಿಗಳು ಪ್ರತಿಭಟನೆಗೆ ನಡೆಸುತ್ತಿದ್ದಾರೆ ಅವರಿಗೆ ತಮ್ಮ ಕಮಿಷನ್ ತಪ್ಪಿ ಹೋಗುವ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ.
ಇಷ್ಟು ದಿನ ರೈತರ ಕರಗಳಿಗೆ ತೊಡಿಸಿದ್ದ ಬಂಧನದ ಬೇಡಿ ಪ್ರಧಾನಿ ಮೋದಿಯವರು ಕಳಚಿದ್ದಾರೆ ಎಂದು ವಿವರಿಸಿದ ಅವರು ಯಾವುದೇ ಉದ್ದೇಶದಿಂದ ಧರಣಿ ನಡೆಸುತ್ತಿದ್ದರೂ ಮುಖಂಡರೊಂದಿಗೆ ಮಾತುಕತೆ ಮುಂದುವರಿಸುತ್ತೇವೆ' ಎಂದಿದ್ದಾರೆ.