ಕೋಲ್ಕತ್ತ, ಆ 16 (DaijiworldNews/PY): ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡಿರುವ ಹಿರಿಯ ನಾಯಕಿ ಸುಶ್ಮಿತಾ ದೇವ್ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಡೆರೆಕ್ ಒಬ್ರಿಯಾನ್ ಉಪಸ್ಥಿತಿಯಲ್ಲಿ ಸುಶ್ಮಿತಾ ದೇವ್ ಅವರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಈ ಬಗ್ಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದ್ದು, "ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸುಷ್ಮಿತಾ ದೇವ್ ಅವರನ್ನು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಂದ ಪ್ರೇರಿತರಾಗಿ ಟಿಎಂಸಿ ಪಕ್ಷಕ್ಕೆ ಆಗಮಿಸಿದ್ದಾರೆ. ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್ ಅವರ ಉಪಸ್ಥಿತಿಯಲ್ಲಿ ಸುಶ್ಮಿತಾ ದೇವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು" ಎಂದು ತಿಳಿಸಿದೆ.
ಎಐಸಿಸಿ ಮಹಿಳಾ ಘಟಕವನ್ನು ಮುನ್ನಡೆಸಿದ್ದ ಸುಶ್ಮಿತಾ ದೇವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದರು. "ಸಾರ್ವಜನಿಕ ಸೇವೆಯ ಹೊಸ ಅಧ್ಯಾಯವನ್ನು ಆರಂಭಿಸುತ್ತೇನೆ. ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ನನ್ನ ಮೂರು ದಶಕಗಳ ಓಡಾಟವನ್ನು ನಾನು ಗೌರವಿಸುತ್ತೇನೆ. ನನ್ನ ಸ್ಮರಣೀಯ ಪ್ರಯಾಣವಾಗಿರುವ ಪಕ್ಷಕ್ಕೆ, ಅದರ ಎಲ್ಲಾ ನಾಯಕರಿಗೆ, ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಮೇಡಂ, ನಿಮ್ಮ ಮಾರ್ಗದರ್ಶನ ಹಾಗೂ ನೀವು ನನಗೆ ನೀಡಿದ ಅವಕಾಶಗಳಿಗಾಗಿ ನಾನು ನಿಮಗೆ ವೈಯುಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಾರ್ವಜನಿಕ ಸೇವೆಯ ಜೀವನದಲ್ಲಿ ಹೊಸ ಅಧ್ಯಾಯನದ ಆರಂಭಕ್ಕೆ ನಿಮ್ಮ ಶುಭ ಹಾರೈಕೆಗಳು ನನಗಿದೆ ಎಂದು ಭಾವಿಸುತ್ತೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.