ಮೈಸೂರು, ಆ 16 (DaijiworldNews/PY): "ಪ್ರಿಯಾಂಕ ಖರ್ಗೆ ಅವರು ಅಟಲ್ ವಿಹಾರಿ ವಾಜಪೇಯಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಜವಾಹರ್ಲಾಲ್ ನೆಹರೂ ಅವರ ವಿರುದ್ದ ಟೀಕಿಸುವುದು ಸೂಕ್ತವಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, "ನೆಹರೂ ಅವರು ತಮ್ಮ ಅಧಿಕಾರದ ಅವಧಿಗಿಂತ ಹೆಚ್ಚಿನ ದಿನಗಳನ್ನು ಜೈಲಿನಲ್ಲಿ ಕಳೆದರು. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಅವರ ಇಡೀ ಕುಟುಂಬವೇ ಭಾಗವಹಿಸಿತ್ತು. ಇವರ ಬಗ್ಗೆ ಲಘವಾಗಿ ಮಾತನಾಡುವುದು ಸಿ ಟಿ ರವಿ ಅವರಿಗೆ ಮಾತ್ರವಲ್ಲ ಬಿಜೆಪಿಗೂ ಶೋಭೆ ತರುವುದಿಲ್ಲ" ಎಂದಿದ್ದಾರೆ.
"ನೆಹರೂ ಅವರು ನಿಧನರಾದ ಸಂದರ್ಭ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಾಂಬೆಯ ರಾಜಕುಮಾರನೋರ್ವ ಭಾರತವನ್ನು ಅಗಲಿದರು ಎಂದಿದ್ದರು. ಆ ಸಂದರ್ಭ ವಾಜಪೇಯಿ ಅವರು ಮಾಡಿದ ಭಾಷಣವನ್ನು ಸಿ ಟಿ ರವಿ ಅವರು ಓದಬೇಕು" ಎಂದು ಹೇಳಿದ್ದಾರೆ.
"ದೇಶಕ್ಕಾಗಿ ನೆಹರೂ ಅವರು ತಮ್ಮ ಆಸ್ತಿಯನ್ನು ಬರೆದಿದ್ದಾರೆ. ಆದರೆ, ರವಿ ಹತ್ತು ಪೈಸೆಯನ್ನೂ ಕೊಟ್ಟಿಲ್ಲ. ಇವರು ಬಳಕೆ ಮಾಡುವ ಪದಗಳನ್ನು ಗಮನಿಸಿದರೆ, ಕನ್ನಡ ಕೊಲೆಯಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಿ ಟಿ ರವಿ ಅವರಿಗೆ ಪ್ರತಿಯಾಗಿ ವಾಜಪೇಯಿ ಅವರನ್ನು ಪ್ರಿಯಾಂಕ ಖರ್ಗೆ ಅವರು ಟೀಕಿಸುವುದು ಸರಿಯಲ್ಲ. ಮೊದಲು ವಾಜಪೇಯಿ ಅವರ ಭಾಷಣಗಳನ್ನು ಕೇಳಿದ ಬಳಿಕ ಮಾತನಾಡಬೇಕು. ತಮ್ಮ ತಂದೆ ಧೀಮಂತ ರಾಜಕಾರಣಿ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿಯಾದರೂ ಪ್ರಿಯಾಂಕ ಖರ್ಗೆ ಅವರು ಕಲಿಯಬೇಕು" ಎಂದಿದ್ದಾರೆ.
"ಪ್ರಮುಖ ನಾಯಕರ ಬಗ್ಗೆ ಈ ರೀತಿಯಾಗಿ ಮಾತನಾಡುತ್ತಿದ್ದರೂ ಕೂಡಾ ಮಾಜಿ ಸಿಎಂಗಳು, ಆಯಾಯ ಪಕ್ಷಗಳ ಹಿರಿಯ ನಾಯಕರು ಬಾಯಿ ಮುಚ್ಚಿ ಎನ್ನುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.
"ಸಚಿವರು ತಮಗೆ ಇಂತದ್ದೇ ಖಾತೆ ಬೇಕು ಎಂದು ಹಠ ಹಿಡಿಯುವುದು ಸೂಕ್ತವಲ್ಲ. ಎಲ್ಲಾ ಖಾತೆಯಲ್ಲೂ ಕೂಡಾ ಕೆಲಸ ಇದೆ. ದುಡ್ಡು ಹೆಚ್ಚಿರುವ ಖಾತೆ ತಮಗೆ ಬೇಕು ಎಂದರೆ ಹೇಗೆ?" ಎಂದು ಕೇಳಿದರು.