ಬೆಂಗಳೂರು, ಆ.16 (DaijiworldNews/HR): 9 ರಿಂದ 12 ನೇ ತರಗತಿವರೆಗೆ ಪ್ರಾರಂಭ ಮಾಡುವ ಕುರಿತು ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದು, ಮುಖ್ಯಮಂತ್ರಿಗಳು ಕೂಡ ಶಾಲೆ ಪ್ರಾರಂಭ ಘೋಷಿಸಿದ್ದಾರೆ. ಆಗಸ್ಟ್ 23 ರಿಂದ ಶಾಲೆಗಳು ಪ್ರಾರಂಭವಾಗುತ್ತವೆ ಆದರೆ ಒಂದೇ ಒಂದು ಸೋಂಕು ಕಂಡು ಬಂದರೂ ತರಗತಿ ನಿಲ್ಲಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತರಗತಿ ಪ್ರಾರಂಭಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳುತ್ತಿದ್ದೇವೆ. ಎರಡು ಜಿಲ್ಲೆ ಹೊರತು ಪಡಿಸಿ ಉಳಿದ ಕಡೆ ಪ್ರಾರಂಭ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಮಕ್ಕಳಿಗೆ ಪೂರಕವಾದ ಮಾರ್ಗಸೂಚಿ ಪ್ರಕಟವಾಗಲಿದೆ" ಎಂದಿದ್ದಾರೆ.
ಇನ್ನು "ಮಕ್ಕಳಿಗೆ ಮಾಸ್ಕ್ ಕಡ್ಡಾಯವಾಗಿದ್ದು, ಮನೆಯಿಂದ ಬಂದು ಮನೆಗೆ ವಾಪಸಾಗುವವರೆಗೆ ಇರಬೇಕು. ಇದನ್ನು ಶಿಕ್ಷಕರು ನೋಡಿಕೊಳ್ಳುತ್ತಾರೆ. ಶಿಕ್ಷಕರಿಂದಲೂ ಶಾಲೆ ಪ್ರಾರಂಭಕ್ಕೆ ಬೆಂಬಲವಿದೆ" ಎಂದರು.
"ಕೊರೊನಾದ ಮೂರನೇ ಅಲೆ ಬರುತ್ತದೆ ಎಂಬ ತಜ್ಙರ ಸಲಹೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಆಗಸ್ಟ್ 30 ರಂದು ತಜ್ಙರ ಸಮಿತಿ ಸಭೆ ನಡೆಯುತ್ತದೆ. ತಜ್ಙರ ಜೊತೆ ಸಿಎಂ ಸಭೆ ನಡೆಸುತ್ತಾರೆ" ಎಂದು ಹೇಳಿದ್ದಾರೆ.