ಶಿಲ್ಲಾಂಗ್, ಆ.16 (DaijiworldNews/HR): ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ಖಾಸಗಿ ನಿವಾಸಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದು, ಇನ್ನೊಂದೆಡೆ 2018ರಲ್ಲಿ ಶರಣಾಗಿದ್ದ ಬಂಡುಕೋರನ ಹತ್ಯೆ ಹಿನ್ನೆಲೆಯಲ್ಲಿ ಶಿಲ್ಲಾಂಗ್ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಗೃಹ ಸಚಿವ ಲಹ್ಕ್ಮೆನ್ ರಿಂಬುಯಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಾಹನಗಳಲ್ಲಿ ಬಂದಿರುವ ದಾಳಿಕೋರರು ಪೆಟ್ರೋಲ್ ತುಂಬಿದ್ದ ಎರಡು ಬಾಟಲಿಗಳನ್ನು ಶಿಲ್ಲಾಂಗ್ನ ಮೂರನೇ ಮೈಲಿಯಲ್ಲಿರುವ ಸಂಗ್ಮಾ ಅವರ ಖಾಸಗಿ ನಿವಾಸದ ಆವರಣಕ್ಕೆ ಎಸೆದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಮೊದಲ ಬಾಟಲಿಯನ್ನು ಮನೆಯ ಮುಂಭಾಗಕ್ಕೆ ಎಸೆಯಲಾಗಿದ್ದು, ಎರಡನೆ ಬಾಟಲಿಯನ್ನು ಮನೆಯ ಹಿಂಭಾಗದಲ್ಲಿ ಹಾಕಲಾಗಿದ್ದು, ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಯ ಮಾಜಿ ಬಂಡುಕೋರನನ್ನು ಎನ್ಕೌಂಟರ್ನಲ್ಲಿ ಹತ್ಯೆಗೈದ ಹಿನ್ನೆಲೆಯಲ್ಲಿ ಶಿಲ್ಲಾಂಗ್ನಲ್ಲಿ ಹಿಂಸಾಚಾರಗಳು ಸಂಭವಿಸಿದ್ದು, ಮೇಘಾಲಯದ ಗೃಹ ಸಚಿವ ಲಹ್ಕ್ಮೆನ್ ರಿಂಬುಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.