ನವದೆಹಲಿ, ಆ 16 (DaijiworldNews/PY): ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 3ನೇ ವರ್ಷದ ಪುಣ್ಯತಿಥಿ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೌರವ ಸಲ್ಲಿಸಿದ್ದಾರೆ.
ಸೋಮವಾರ ಮುಂಜಾನೆ ದೆಹಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಯಾದ ಸದೈವ್ ಅಟಲ್ಗೆ ಭೇಟಿ ನೀಡಿದ ಅವರು, ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದ್ದಾರೆ.
ಈ ವೇಳೆ ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಇತರರು ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭ ವಾಜಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಅವರು ಹಾಗೂ ಮೊಮ್ಮಗಳು ನಿಹಾರಿಕಾ ಕೂಡಾ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಅವರ ವ್ಯಕ್ತಿತ್ವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಪ್ರೀತಿಯ ಸ್ವಭಾವ, ಬುದ್ದಿ ಹಾಗೂ ಹಾಸ್ಯಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅಟಲ್ ಜೀ ಅವರು ನಮ್ಮ ಜನರ ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಇದ್ದಾರೆ. ಇಂದು ಅವರ ಪುಣ್ಯ ತಿಥಿಯಾಗಿದ್ದು, ಸದೈವ್ ಅಟಲ್ಗೆ ತೆರಳಿ ಗೌರವ ಸಲ್ಲಿಸಲಾಯಿತು" ಎಂದು ತಿಳಿಸಿದ್ದಾರೆ.