ಬೆಂಗಳೂರು, ಆ.16 (DaijiworldNews/HR): ದೇಶಾದ್ಯಂತ ಕೇಂದ್ರದ ನೂತನ ಸಚಿವರು ಇಂದಿನಿಂದ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿದ್ದು, ರಾಜ್ಯದ ನಾಲ್ವರು ಕೇಂದ್ರ ಸಚಿವರು ತಮ್ಮ ವಿಭಾಗ ವ್ಯಾಪ್ತಿಯಲ್ಲಿ ಯಾತ್ರೆ ನಡೆಸಲಿದ್ದಾರೆ.
ಕರಾವಳಿ ಭಾಗದಲ್ಲಿ (ದಕ್ಷಿಣ ಕನ್ನಡ) ಕೃಷಿ ಮತ್ತು ರೈತರ ಕಲ್ಯಾಣ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ, ಹಳೇ ಮೈಸೂರು ಭಾಗದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ನಾರಾಯಣಸ್ವಾಮಿ, ಬೆಂಗಳೂರು ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಕಲಬುರಗಿ ವಿಭಾಗದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಭಗವಂತ ಖೂಬಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಯಾತ್ರೆ ಕೈಗೊಳ್ಳಲಿದ್ದಾರೆ.
ಇನ್ನು ಬಹುತೇಕರು ತಮ್ಮ ಕ್ಷೇತ್ರಗಳಿಂದಲೇ ಸೋಮವಾರ ಯಾತ್ರೆ ಆರಂಭಿಸಲಿದ್ದು, ವಿವಿಧ ಊರುಗಳನ್ನು ಸಂಚರಿಸಲಿದ್ದಾರೆ. ದೇವಸ್ಥಾನ ಭೇಟಿ, ಸ್ಥಳೀಯಮಟ್ಟದ ಸಭೆಗಳು ಯಾತ್ರೆಯ ಭಾಗವಾಗಿವೆ. ಸ್ಥಳೀಯ ಶಾಸಕರು, ರಾಜ್ಯ ಸರ್ಕಾರದ ಸಚಿವರು ಕೂಡ ಯಾತ್ರೆಯಲ್ಲಿ ಕೇಂದ್ರ ಸಚಿವರಿಗೆ ಸಾಥ್ ನೀಡಲಿದ್ದಾರೆ.