ಹನೂರು, ಆ 15 (DaijiworldNews/HR): "ಸಿ.ಟಿ.ರವಿ ಮತ್ತು ಸಚಿವ ಈಶ್ವರಪ್ಪ ನಾಲಾಯಕ್ಗಳು ಅವರಿಬ್ಬರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು. ಆದುದರಿಂದಲೇ ರಾಷ್ಟ್ರನಾಯಕರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿಯವರ ಮಾತು ದುರಹಂಕಾರದ ಪರಮಾವಧಿಯ ಮಾತುಗಳಾಗಿದ್ದು, ಅವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಇತಿಹಾಸ ತಿಳಿಯದವನು ಇತಿಹಾಸವನ್ನು ಸೃಷ್ಠಿಸಲಾರ ಎಂದು ಹೇಳಿದ್ದಾರೆ. ಸಿ.ಟಿರವಿಯವರಿಗೆ ಇಂದಿರಾಗಾಂಧಿಯವರ ತ್ಯಾಗದ ಬಗ್ಗೆ ಅರಿವಿಲ್ಲ. ಈ ದೇಶಕ್ಕೆ ನಿಜವಾದ ಅನ್ನಪೂರ್ಣೇಶ್ವರಿ ಎಂದರೇ ಅದು ದಿ.ಇಂದಿರಾಗಂಧಿಯವರು" ಎಂದರು
ಇನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದಿನಿಂದ ನವಕರ್ನಾಟಕ ನಿರ್ಮಾಣವಾಗಲಿದೆ ಎಂಬ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, "ಕರ್ನಾಟಕ ರಾಜ್ಯವನ್ನು ನವ ಕರ್ನಾಟಕವನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಕೆ.ಸಿ.ರೆಡ್ಡಿ ಯವರ ಕಾಲದಿಂದ ಸಿದ್ಧರಾಮಯ್ಯ ಅವರ ಕಾಲದವರೆಗೂ ಪ್ರತಿಯೊಬ್ಬರೂ ಕೊಡುಗೆ ನೀಡಿದ್ದಾರೆ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಅವಕಾಶ ನೀಡಿದ್ದರಿಂದ ಬೆಂಗಳೂರು ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಅಲ್ಲದೆ ರಾಹ್ಯದ ಅತಿ ಹೆಚ್ಚಿನ ಆದಾಯ ಬರುತ್ತಿದೆ. ಅಲ್ಲದೆ ಸಿದ್ಧರಾಮಯ್ಯ ಅವರೂ ಕೂಡ ಹಲವಾರು ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.