ನವದೆಹಲಿ, ಆ 15 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಗಳಲ್ಲಿ ಕೇವಲ ಯೋಜನೆಗಳ ಬಗ್ಗೆ ಮಾತ್ರವೇ ಘೋಷಣೆ ಮಾಡುತ್ತಾರೆ ಆದರೆ, ಅವರುಗಳನ್ನು ಜಾರಿಗೊಳಿಸುವುದಿಲ್ಲ" ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ದೇಶವು ಏಳು ವರ್ಷಗಳಿಂದ ಪ್ರಧಾನ ಮಂತ್ರಿಯವರ ಅದೇ ಭಾಷಣಗಳನ್ನು ಕೇಳುತ್ತಿದೆ. ಅವರು ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಾರೆಯೇ ಹೊರತು ಅದನ್ನು ಎಂದಿಗೂ ಕಾರ್ಯಗತಗೊಳಿಸುವುದಿಲ್ಲ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರು ಬಹಳಷ್ಟು ವಿಚಾರಗಳನ್ನು ಹೇಳುತ್ತಾರೆ. ಆದರೆ, ಎಂದಿಗೂ ಅವುಗಳನ್ನು ಪಾಲಿಸುವುದಿಲ್ಲ. ಈಗ ಮೂರು ಹೊಸ ಕೃಷಿ ಕಾನೂನುಗಳನ್ನು ತರುವ ಮುಖೆನ ರೈತರಿಗೆ ವಿನಾಶ ತಂದೊಡಿದ್ದಾರೆ" ಎಂದು ಹೇಳಿದ್ದಾರೆ.
"ಕೆಂಪು ಕೋಟೆಯ ಮೇಲೆ ಕಾಂಗ್ರೆಸ್ ಅನ್ನು ಪದೇ ಪದೇ ಟೀಕಿಸುವುದು ಸರಿಯಲ್ಲ. ಇದರಿಂದ ದೇಶ ಪ್ರಗತಿ ಸಾಧಿಸುವುದಿಲ್ಲ. ಕಾಂಗ್ರೆಸ್ ತನ್ನ ಆಡಳಿತಾವಧಿಯ ವೇಳೆ ರೈತರಿಗಾಗಿ ನೀರಾವರಿ ವ್ಯವಸ್ಥೆಯನ್ನು ನೀಡುವಂತಹ ಹಲವು ಕಾರ್ಯಗಳನ್ನು ಮಾಡಿದೆ. ಯುಪಿಎ ಅಧಿಕಾರದಲ್ಲಿದ್ದ ಸಂದರ್ಭ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಮಧಿ ಅವರು ರೈತರ ಸಾಲ ಮನ್ನಾ ಮಾಡಿದ್ದರು" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, "ಆಗಸ್ಟ್ 15, 2019ರಿಮದ ಎರಡು ವರ್ಷಗಳು ಕಳೆದಿವೆ. ಕನಿಷ್ಠ 100 ಲಕ್ಷ ಕೋಟಿ ಸಂಖ್ಯೆಯನ್ನು ಬದಲಾವಣೆ ಮಾಡಬಹುದಿತ್ತು" ಎಂದು ಹೇಳಿದ್ದಾರೆ.
"ಮೂರು ಕೃಷಿ ಕಾನೂನುಗಳನ್ನು ಪ್ರಧಾನಿ ಮೋದಿ ಅವರು ಹಿಂಪಡೆಯುತ್ತೇನೆ ಎಂದು ಘೋಷಿಸಿದ್ದರೆ ಅದೇ ಐತಿಹಾಸಿಕ ದಿನವಾಗುತ್ತಿತ್ತು" ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಹ ಬಾಜ್ವಾ ತಿಳಿಸಿದ್ದಾರೆ.